ಪೊನ್ನಂಪೇಟೆ, ಸೆ. ೨೩ : ಈ ಬಾರಿ ತೀವ್ರ ಕುತೂಹಲ ಕೆರಳಿಸಿರುವ ಪ್ರತಿಷ್ಠಿತ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಆಯ್ಕೆ ಚುನಾವಣೆ ತಾ. ೨೪ ರಂದು (ಇಂದು) ನಡೆಯಲಿದೆ. ಒಟ್ಟು ೧೩ ನಿರ್ದೇಶಕರ ಪೈಕಿ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಮಂಜುಳ ಸುರೇಶ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಪ್ರಭು ಎಂಬವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ೧೧ ಸ್ಥಾನಕ್ಕೆ ಒಟ್ಟು ಇಪ್ಪತ್ತು ಮಂದಿ ಆಕಾಂಕ್ಷಿಗಳು ಸ್ಪರ್ಧಿಸಿದ್ದಾರೆ. ಎರಡು ಪ್ರತ್ಯೇಕ ಬಣಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸುತ್ತಿವೆ. ಸದಸ್ಯರ ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿವೆ. ಒಬ್ಬರು ಮಾತ್ರ ಎರಡೂ ತಂಡದಿAದ ಹೊರಗುಳಿದು ಪ್ರತ್ಯೇಕವಾಗಿ ಸ್ಪರ್ಧಿಸಿದ್ದಾರೆ. ಸಂಘದ ಹಾಲಿ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ನೇತೃತ್ವದ ತಂಡದಲ್ಲಿ ಅಡ್ಡಂಡ ಸುನಿಲ್ ಸೋಮಯ್ಯ, ಐನಂಡ ಬೋಪಣ್ಣ, ಚಿರಿಯಪ್ಪಂಡ ಕೆ. ಉತ್ತಪ್ಪ, ಚೆಪ್ಪುಡಿರ ಎಸ್. ಉತ್ತಪ್ಪ, ಚೆಪ್ಪುಡಿರ ಎಂ. ಪೊನ್ನಪ್ಪ, ಮಚ್ಚಾಮಡ ಜಿ. ನಂಜಪ್ಪ, ಮೂಕಳೇರ ಜಿ. ರಮೇಶ್ ಇವರುಗಳು ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ. ಮಹಿಳಾ ಕ್ಷೇತ್ರಕ್ಕೆ ಮೂಕಳೇರ ಬೀಟಾ ಲಕ್ಷö್ಮಣ, ಕೆ.ಟಿ. ಸುವಿನ್ ಸ್ಪರ್ಧಿಸಿದ್ದರೆ, ಹಿಂದುಳಿದ ವರ್ಗ ಎ ಕ್ಷೇತ್ರಕ್ಕೆ ಪಿ.ಎ. ಅಝೀಜ್, ಹಿಂದುಳಿದ ವರ್ಗ ಬಿ ಕ್ಷೇತ್ರಕ್ಕೆ ಕೋಳೆರ ದಯಾ ಚಂಗಪ್ಪ ಮರು ಆಯ್ಕೆ ಬಯಸಿದ್ದಾರೆ. ಈ ತಂಡದ ನೇತೃತ್ವ ವಹಿಸಿರುವ ಚಿರಿಯಪಂಡ ಕೆ. ಉತ್ತಪ್ಪ (ಉಮೇಶ್) ೧೯೭೩ ರಿಂದ ೫೦ ವರ್ಷಗಳಿಂದ ಈ ಬ್ಯಾಂಕಿನಲ್ಲಿ ನಿರಂತರವಾಗಿ ನಿರ್ದೇಶಕರಾಗಿ, ಸತತ ೮ ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡು ಸೋಲಿಲ್ಲದ ಸರದಾರರಾಗಿದ್ದು, ಈ ಬಾರಿಯೂ ಸ್ಪರ್ಧಾಕಣ ದಲ್ಲಿದ್ದಾರೆ. ಈ ತಂಡದ ವಿರುದ್ಧ ಸ್ಪರ್ಧಿಸಿರುವ ಮತ್ತೊಂದು ತಂಡದಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಚಿರಿಯಪಂಡ ಎಂ. ಕುಶಾಲಪ್ಪ, ಮತ್ರಂಡ ಎಸ್. ಬೋಪಣ್ಣ, ಮುಕ್ಕಾಟಿರ ಕೆ. ಅರುಣ, ಎಂ.ಎ. ಶಾಜಿ ಅಚ್ಯುತನ್ ಹಾಗೂ ಮಹಿಳಾ ಮೀಸಲು ಕ್ಷೇತ್ರದಲ್ಲಿ ಕೊಳೇರ ಡಿ. ಯಮುನ ಭಾರತಿ, ಮೂಕಳೇರ ಆಶಾ, ಹಿಂದುಳಿದ ಪ್ರವರ್ಗ ಎ ಕ್ಷೇತ್ರದಲ್ಲಿ ಅಲೀರ ಎ ಹ್ಯಾರಿಸ್, ಹಾಗೂ ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಬಯವಂಡ ಕೆ. ನವನೀಶ್ ಸ್ಪರ್ಧಿಸಿದ್ದಾರೆ. ಇವರ ಹೊರತಾಗಿ ಪೊನ್ನಂಪೇಟೆಯ ಇಗ್ಗುತ್ತಪ್ಪ ಸೌಹಾರ್ದ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷ ಮದ್ರೀರ ಸೋಮಯ್ಯ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ.

ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ಗೆ ಹಲವು ಬಾರಿ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ನಡೆದಿತ್ತು. ಆದರೆ ಇದುವರೆಗೂ ಅವಕಾಶ ಸಿಗದಿರುವ ಹಲವರು ಸೇರಿ ಈ ಬಾರಿ ಮತ್ತೊಂದು ತಂಡ ಮಾಡಿಕೊಂಡು ಸ್ಪರ್ಧಾ ಕಣಕ್ಕಿಳಿದಿದ್ದಾರೆ.