ಮಡಿಕೇರಿ, ಸೆ. ೨೩ : ಬರಹಗಾರ ಉಡುವೆರ ವಿಠಲ್ ತಿಮ್ಮಯ್ಯ ಅವರು ಬರೆದಿರುವ ಕೊಡವ ಮಕ್ಕಡ ಕೂಟದ ೭೩ನೇ ಪುಸ್ತಕ ಕೊಡವ ಭಾಷೆಯ "ಬೊಳ್ಳಿ ಬಿಲ್ಲ್" ಬಿಡುಗಡೆಗೊಂಡಿದೆ.

ನಗರದ ಪತ್ರಿಕಾ ಭವನದಲ್ಲಿ ಡಿಎಫ್‌ಓ ಅಜ್ಜಿಕುಟ್ಟಿರ ಪೂವಯ್ಯ ಅವರು ಪುಸ್ತಕ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರ ಬೇರೆ ಕ್ಷೇತ್ರಗಳಂತಲ್ಲ, ಇದೊಂದು ವಿಭಿನ್ನ ಕ್ಷೇತ್ರವಾಗಿದ್ದು, ಕಬ್ಬಿಣದ ಕಡಲೆ ಇದ್ದಂತೆ, ಇದಕ್ಕೆ ಸ್ವಯಂ ಪ್ರತಿಭೆ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ತನ್ನ ಅಧ್ಯಕ್ಷತೆಯಲ್ಲಿ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು ೭೨ ಕೃತಿಗಳನ್ನು ಬಿಡುಗಡೆ ಮಾಡಿದೆ. ಇದೀಗ ೭೩ನೇ ಪುಸ್ತಕ "ಬೊಳ್ಳಿ ಬಿಲ್ಲ್" ನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ೭೨ ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಇದೀಗ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಬರೆದ "೧೯೬೫ರ ಯುದ್ಧ ಹಾಗೂ ಕೊಡಗಿನ ಮಹಾವೀರ ಸ್ಕಾ÷್ವ.ಲೀ ಅಜ್ಜಮಾಡ ದೇವಯ್ಯ" ಅವರ ಪುಸ್ತಕವು ಬಾಲಿವುಡ್ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದ್ದು, ಬಾಲಿವುಡ್‌ನ ನಿರ್ದೇಶಕ ಸಂದೀಪ್ ಚಿತ್ರ ನಿರ್ದೇಶನಕ್ಕೆ ಕೊಡವ ಮಕ್ಕಡ ಕೂಟದ ವತಿಯಿಂದ ಎನ್‌ಓಸಿ ಪಡೆದುಕೊಂಡಿದ್ದಾರೆ.

ಅಲ್ಲದೇ ಸ್ವಾ÷್ಕ.ಲೀ.ಅಜ್ಜಮಾಡ ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಮತ್ತು ಮಕ್ಕಳಿಂದ ಅನುಮತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಬೊಳ್ಳಿ ಬಿಲ್ಲ್ ಪುಸ್ತಕದ ಬರಹಗಾರ ಉಡುವೆರ ವಿಠಲ್ ತಿಮ್ಮಯ್ಯ ಮಾತನಾಡಿ, "ಬೊಳ್ಳಿ ಬಿಲ್ಲ್" ಪುಸ್ತಕವು ಕೊಡವ ಪದ್ಧತಿ, ಸಂಸ್ಕೃತಿ, ಮರ ಗಿಡ, ವಾತಾವರಣ, ಹಬ್ಬ ಹರಿದಿನ, ಕೊಡಗಿನ ಪ್ರಕೃತಿ, ಔಷಧಿ ಗಿಡಮೂಲಿಕೆ ಬಗ್ಗೆ ಮಾಹಿತಿ ಇರುವ ಸಂಗ್ರಹ ಪುಸ್ತಕವಾಗಿದ್ದು, ಇದು ಮೊದಲ ಕೃತಿಯಾಗಿದೆ ಎಂದರು.

ಸಮಾಜ ಸೇವಕರಾದ ತೆಕ್ಕಬೊಟ್ಟೋಳಂಡ ಗಣೇಶ್, ಅಡ್ಡಂಡ ಚಂಗಪ್ಪ ಹಾಗೂ ಕೋಟೇರ ತಾರಾ ನಂಜಪ್ಪ ಉಪಸ್ಥಿತರಿದ್ದರು.