ಸಿದ್ದಾಪುರ, ಸೆ. ೨೩: ಗುಹ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಯ ಪಥದಲ್ಲಿದೆ ಎಂದು ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದ್ದಾರೆ. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ೨೦೨೨-೨೩ ನೇ ಸಾಲಿನಲ್ಲಿ ಸಂಘವು ರೂ ೧.೦೪ ಕೋಟಿ ಲಾಭ ಗಳಿಸಿದೆ. ಸಂಘದಲ್ಲಿ ಪಾಲು ಬಂಡವಾಳ ರೂ ೧.೯೯ ಕೋಟಿ ಹಾಗೂ ಠೇವಣಿಗಳು ರೂ ೪೦.೫೪ ಕೋಟಿ ಇದ್ದು, ೨೦೨೨-೨೩ನೇ ಸಾಲಿನಲ್ಲಿ ಸಂಘವು ರೂ. ೨೧೩.೫೮ ಕೋಟಿ ವ್ಯವಹಾರ ನಡೆಸಿದೆ. ಅಲ್ಲದೆ ಸಂಘದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಹತ್ತನೇ ತರಗತಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿAದ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ. ೨ ಸಾವಿರ ಹಾಗೂ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರೂ. ೫ ಸಾವಿರ ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿದೆ ಎಂದರು. ಸಂಘದ ಸದಸ್ಯರಾದವರು ಮೃತಪಟ್ಟಲ್ಲಿ ಅಂತ್ಯಕ್ರಿಯೆಗೆ ರೂ. ೫ ಸಾವಿರ ಸಹಾಯಧನ ನೀಡಲಾಗುತ್ತಿದೆ. ಸಂಘದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೆಟ್ರೋಲ್ ಬಂಕ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು.
ಈ ಸಂದರ್ಭ ಸಂಘದಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ಸಂಘದ ಸದಸ್ಯರುಗಳಾದ ಕೆ.ಸಿ. ಮೇರಿ, ಜನಾಬ್ ಮೊಯ್ದೀನ್ ಕೆ.ಎಂ, ಚೇನಂಡ ಬಿ. ಪೂಣಚ್ಚ, ಕೃಷಿಯಲ್ಲಿ ಸಾಧನೆ ಮಾಡಿದ ಗುಹ್ಯ ಗ್ರಾಮದ ಮೂಕಂಡ ಉಜ್ವಲ್ ಪೂವಯ್ಯರನ್ನು ಸನ್ಮಾನಿಸಲಾಯಿತು. ಉತ್ತಮ ವ್ಯವಹಾರ ನಡೆಸಿದ ವ್ಯಾಪ್ತಿಯ ಮೂರು ಸ್ವ ಸಹಾಯ ಗುಂಪುಗಳಿಗೆ ಸಂಘದ ವತಿಯಿಂದ ರೂ. ೫ ಸಾವಿರ ಬಹುಮಾನ ವಿತರಿಸಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗುಹ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಬಿ. ಪ್ರಸನ್ನ, ಸಹಕಾರಿ ಸಂಘದ ಉಪಾಧ್ಯಕ್ಷ ಎಂ. ಬಿಜಾಯ್, ಕೆ.ಕೆ. ಚಂದ್ರ ಕುಮಾರ್, ಕೆ.ಎಸ್. ಸುನಿಲ್, ಪಿ.ಕೆ. ಚಂದ್ರನ್, ಕೆ.ಸಿ. ಮಿಲನ್, ವಿ.ಕೆ. ಬಶೀರ್, ಸಿ.ಎಂ. ಚಾಕೋ, ಎಂ.ಸಿ. ವಾಸು, ಎಚ್.ಕೆ. ಚೆಲುವಯ್ಯ, ಎಸ್.ಬಿ. ಪ್ರತೀಶ್, ಎಂ.ಪಿ. ಪ್ರಮೀಳ, ಕೆ.ಆರ್. ದೇವಯಾನಿ, ಸಿಬ್ಬಂದಿಗಳು ಹಾಗೂ ಸಂಘದ ಸದಸ್ಯರುಗಳು ಹಾಜರಿದ್ದರು.