ವೀರಾಜಪೇಟೆ: ಸೆ, ೨೩: ವಿಶಿಷ್ಠ ಸಂಸ್ಕೃತಿ ಹೊಂದಿರುವ ಕೊಡವ ಜನಾಂಗಕ್ಕೆ ಕ್ರೀಡೆ ಎಂಬುದು ರಕ್ತಗತ ವಾಗಿ ಬಂದಿದೆ ಎಂದು ಹಿರಿಯ ಹಾಕಿ ತರಬೇತುದಾರ ಹಾಗೂ ವೀರಾಜಪೇಟೆ ಕೊಡವ ಒಕ್ಕೂಟ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದ ಶತಮಾನದ ಸಂಭ್ರಮಾ ಚರಣೆ ಅಂಗವಾಗಿ ಕೊಡವ ಸಮಾಜದ ಆವರಣದಲ್ಲಿ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜರ ಆಳ್ವಿಕೆಯ ಕಾಲದಲ್ಲಿ ಕೊಡವರು ಪಡೆ ಕಟ್ಟಲು (ಸೈನ್ಯ ಕಟ್ಟಲು) ತಮ್ಮನ್ನು ತೊಡಗಿಸಿಕೊಂಡಿದ್ದರು. ಯೋಧ ಪರಂಪರೆಯನ್ನು ಇಂದಿಗೂ ಜೀವಂತ ವಾಗಿರಿಸುವ ನಿಟ್ಟಿನಲ್ಲಿ ಆಚರಣೆಯ ಭಾಗವಾಗಿ ಅನೇಕ ಕುರುಹುಗಳಿವೆ. ಕ್ರೀಡೆ ಎಂಬುದು ಕೊಡವರ ಅವಿಭಾಜ್ಯ ಅಂಗವಾಗಿದೆ. ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಮೂಲಕ ಕ್ರೀಡೆಯ ಮೇಲಿರುವ ಪ್ರೇಮವನ್ನು ಜನಾಂಗ ಸಾಬೀತು ಪಡಿಸಿದೆ. ಇದೀಗ ಎಲ್ಲಾ ಕ್ರೀಡಾ ಕ್ಷೇತ್ರದಲ್ಲಿ ಕೊಡವರು ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ದೈಹಿಕವಾಗಿ ಮಾನಸಿಕವಾಗಿ ಸದೃಢ ಗೊಳಿಸಿ ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ಕರೆ ನೀಡಿದರು.

ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಸಮಾಜವು ಶತಮಾನೋತ್ಸವ ಹೊಸ್ತಿಲಲ್ಲಿದೆ. ಜನಾಂಗ ಬಾಂಧವರು ಇದನ್ನು ಹಬ್ಬದ ರೂಪದಲ್ಲಿ ಆಚರಿಸುವ ನಿಟ್ಟಿನಲ್ಲಿ ಎರಡು ದಿನಗಳು ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕೊಡವ ಸಮಾಜ ಕ್ರೀಡಾ ಸಮಿತಿ ಕಾರ್ಯದರ್ಶಿ ಅಮ್ಮಣಿಚಂಡ ಪಿ. ಸುಬ್ರಮಣಿ ಮಾತನಾಡಿದರು. ಕೊಡವ ಸಮಾಜದ

(ಮೊದಲ ಪುಟದಿಂದ) ಉಪಾಧ್ಯಕ್ಷ ಕುಯ್ಯಮಂಡ ಕಿರಣ್, ಮರಣ ನಿಧಿ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ, ಕಾರ್ಯದರ್ಶಿ ಮಾಳೇಟಿರ ಎ. ಶ್ರೀನಿವಾಸ್ ಸಮಾಜದ ನಿರ್ದೇಶಕರು ಉಪಸ್ಥಿತಿತರಿದ್ದರು.

ಜನಾಂಗದ ಪುರುಷರು ಹಾಗೂ ಮಹಿಳೆಯರಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ, ಕೊಡವ ವಾಲಗತಾಟ್ ಪೈಪೋಟಿ ನಡೆಯಿತು.

ವೀರಾಜಪೇಟೆ ಕೊಡವ ಸಮಾಜದ ನಿರ್ದೇಶಕರು ಆಡಳಿತ ಮಂಡಳಿಯ ಸದಸ್ಯರು, ನಗರದ ವಿವಿಧ ಕೊಡವ ಕೇರಿಯ ಪದಾಧಿಕಾರಿಗಳು, ವಿವಿಧ ಕೊಡವ ಸಮಾಜದ ಪ್ರತಿನಿಧಿಗಳು ಇನ್ನಿತರರು ಭಾಗವಹಿಸಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ