ಶನಿವಾರಸಂತೆ, ಸೆ. ೨೨: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ ಗ್ರಾಮದಲ್ಲಿ ಕೆರೆ ಸರ್ವೆ ಕಾರ್ಯಕ್ಕೆ ತೆರಳಿದ್ದ ಸರ್ವೆ ಇಲಾಖಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಅಧಿಕಾರಿ ಮಹಾದೇವೇಗೌಡ, ಸಹಾಯಕ ಸಿಬ್ಬಂದಿ ಸಂತೋಷ್, ಹಂಡ್ಲಿ ವೃತ್ತದ ಕಂದಾಯ ಇಲಾಖೆ ಗ್ರಾಮಾಧಿಕಾರಿ ಶ್ವೇತಾಶ್ರೀ, ಗ್ರಾಮ ಸಹಾಯಕ ರಾಜು ಹಾಗೂ ಬಿಲ್ ಸಂಗ್ರಾಹಕ ಚಂದ್ರಶೇಖರ್ ಅವರ ಮೇಲೆ ಹೆಜ್ಜೇನು ದಾಳಿ ಮಾಡಿದೆ.

ಬೆಳ್ಳಾರಳ್ಳಿ ಗ್ರಾಮದಲ್ಲಿ ೬ ಕೆರೆಗಳಿದ್ದು ಒತ್ತುವರಿ ಆಗಿರುವ ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು ೪ ಕೆರೆಗಳ ಸರ್ವೆ ಕೆಲಸ ಮುಗಿಸಿ, ೫ ನೇ ಕೆರೆಯ ಸರ್ವೆ ಕಾರ್ಯಕ್ಕೆ ಹೋಗುವಾಗ ಬೆಳೆಗಾರ ಮಲ್ಲಿಕಾರ್ಜುನ ಅವರ ತೋಟದ ಮರದಲ್ಲಿದ್ದ ಹೆಜ್ಜೇನುಗಳು ದಾಳಿ ನಡೆಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸರ್ವೆ ಇಲಾಖಾಧಿಕಾರಿ ಮಹಾದೇವೇಗೌಡ, ಸಹಾಯಕ ಸಿಬ್ಬಂದಿ ಸಂತೋಷ್ ಅವರನ್ನು ಮೈಸೂರಿನ ಆಸ್ಪತ್ರಗೆ, ಗ್ರಾಮಾಧಿಕಾರಿ ಶ್ವೇತಾಶ್ರೀ ಹಾಗೂ ರಾಜು ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾದೇವೇಗೌಡ ಹಾಗೂ ಶ್ವೇತಾಶ್ರೀ ಅವರಿಬ್ಬರು ಗಂಭೀರವಾಗಿ ಗಾಯಗೊಂಡಿರುತ್ತಾರೆ. ಚಿಕಿತ್ಸೆಗೆ ಸ್ಪಂದಿಸಿದ ಗಾಯಾಳುಗಳ ಆರೋಗ್ಯ ಸುಧಾರಿಸುತ್ತಿದೆ ಎಂದು ತಿಳಿಸಿರುತ್ತಾರೆ.