ಸೋಮವಾರಪೇಟೆ, ಸೆ. ೨೩ : ೧೦೪ನೇ ವರ್ಷದಲ್ಲಿ ಸಾಗುತ್ತಿರುವ ಇಲ್ಲಿನ ೨೭೫೯ನೇ ಸೋಮವಾರಪೇಟೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ೧.೧೧ ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೨೨ರಷ್ಟು ಡಿವಿಡೆಂಡ್ ನೀಡಲಾಗುವುದು. ಸಂಘದ ವಾರ್ಷಿಕ ಮಹಾಸಭೆ ತಾ. ೨೪ರಂದು (ಇಂದು) ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ರೂಪಾ ಸತೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಒಟ್ಟು ವ್ಯವಹಾರ ೩೮೧ ಕೋಟಿಯಾಗಿದೆ. ದುಡಿಯುವ ಬಂಡವಾಳ ೬೮.೨೫ ಕೋಟಿಯಿದ್ದು, ಒಟ್ಟು ೪,೮೮೨ ಸದಸ್ಯರಿದ್ದಾರೆ. ಸದಸ್ಯರಿಗೆ ಹಾಗೂ ಗ್ರಾಹಕರಿಗೆ ರೂ.೪೯.೩೦ ಕೋಟಿ ಸಾಲ ವಿತರಿಸಲಾಗಿದೆ. ಸಂಘದ ಒಟ್ಟು ಠೇವಣಾತಿ ರೂ. ೪,೦೩೧.೨೮ ಲಕ್ಷ ಇದ್ದು, ಠೇವಣಿ ಸಂಗ್ರಹಣೆಯಲ್ಲಿ ೯೯.೮೭ ಲಕ್ಷ ಅಧಿಕವಾಗಿದೆ ಎಂದು ಮಾಹಿತಿ ನೀಡಿದರು.
ಸಂಘದಲ್ಲಿ ರೂ.೨೫,೦೦೦ ಮರಣನಿಧಿ ಯೋಜನೆಯು ಜಾರಿಯಲ್ಲಿದೆ. ೨೦೨೨-೨೩ ನೇ ಸಾಲಿನಲ್ಲಿ ೩೨ ಸದಸ್ಯರ ಕುಟುಂಬಕ್ಕೆ ರೂ.೫.೮೩ ಲಕ್ಷ ವಿತರಿಸಲಾಗಿದೆ. ಒಟ್ಟು ೧೩ ಸದಸ್ಯರುಗಳ ಜಾಮೀನು ಸಾಲದ ಅಸಲು ಮತ್ತು ಬಡ್ಡಿ ರೂ. ೫.೬೯ಲಕ್ಷಗಳನ್ನು ಸಂಘದಿAದ ಭರಿಸಿ ಚುಕ್ತಗೊಳಿಸಲಾಗಿದೆ. ಸ್ವಸಹಾಯ ಗುಂಪುಗಳ ಯೋಜನೆಯನ್ನು ರೂಪಿಸಿದ್ದು, ಪ್ರಸಕ್ತ ಸಾಲಿನಲ್ಲಿ ೧೦ ಗುಂಪುಗಳಿಗೆ ರೂ.೪೪.೨೦ ಲಕ್ಷ ಸಾಲ ವಿತರಿಸಲಾಗಿದೆ. ಜಂಟಿ ಬಾಧ್ಯತಾ ಗುಂಪುಗಳ ಯೋಜನೆಯಡಿ ೩೨ ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ವಿತರಿಸಲಾಗಿದೆ. ಸಾಲ ಮರುಪಾವತಿ ಶೇ.೯೭.೦೭ ರಷ್ಟಿದೆ ಎಂದು ತಿಳಿಸಿದರು.
ತಾ. ೨೪ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ. ಸಂಘವು ಸರ್ವ ಸ್ಪರ್ಶಿ ಮತ್ತು ಸರ್ವ ವ್ಯಾಪ್ತಿಯಾಗಿ ಸೇವೆ ಸಲ್ಲಿಸುತ್ತಿದೆ. ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಸದಸ್ಯರ ಸಹಕಾರ ದಿಂದ ಸಂಘವು ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಮಾಜೀ ಅಧ್ಯಕ್ಷ ಹೆಚ್.ಕೆ. ಮಾದಪ್ಪ ತಿಳಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಪಿ. ದಿವಾನ್, ನಿರ್ದೇಶಕರುಗಳಾದ ಪಿ.ಎ. ಅನಿತಾ ಆನಂದ್, ಪಿ.ಡಿ. ಮೋಹನ್ ದಾಸ್, ಕೆ.ಕೆ. ಚಂದ್ರಿಕಾ, ಬಿ. ಶಿವಪ್ಪ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರುಗಳು ಉಪಸ್ಥಿತರಿದ್ದರು.