ಕೂಡಿಗೆ, ಸೆ. ೨೦: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಶಾಲನಗರ ತಾಲೂಕು ಶ್ರೀ ವಿಶ್ವಕರ್ಮ ಸೇವಾ ಸಮಿತಿಯ ವತಿಯಿಂದ ಮೊದಲನೇ ವರ್ಷದ ವಿಶ್ವ ಕರ್ಮ ಜಯಂತಿ ಆಚರಿಸಲಾಯಿತು.

ಇದರ ಅಂಗವಾಗಿ ಸಮುದಾಯದ ಮಹಿಳೆಯರು ಕಾವೇರಿ ನದಿಯಲ್ಲಿ ಗಂಗೆ ಪೂಜೆ ಮಾಡಿ ನಂತರ ಕಲಶವನ್ನು ಹೊತ್ತು ಗ್ರಾಮದ ಪ್ರಮುಖ ಪೇಟೆ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕಾಳಿಕಾಂಭ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಉಮಾಮಹೇಶ್ವರ ದೇವಾಲಯದಲ್ಲಿ ಕಲಶ ಪೂಜೆಯನ್ನು ನೆರವೇರಿಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾಬಾಯಿ ನೆರವೇರಿಸಿದರು. ಸಮುದಾಯದರು ಒಕ್ಕೂಟದ ಮೂಲಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮಕ್ಕೆ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಕರ್ಮ ಸೇವಾ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಟಿಗಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಗಣೇಶ, ಕುಶಾಲನಗರ ವಿಶ್ವಕರ್ಮ ಸಮಾಜದ ಅಧ್ಯಕ್ಷ ಲಿಂಗಮೂರ್ತಿ, ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ವಿ. ಕೃಷ್ಣ, ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್, ಸಮಾಜ ಪ್ರಮುಖರಾದ ಎಂ.ಎಸ್. ವಿಜಯಕುಮಾರ್, ಎಸ್.ಜೆ. ಮಹಾದೇವ, ಎಸ್.ಸಿ. ಪ್ರಕಾಶ್ ಹಾಗೂ ಇತರರು ಇದ್ದರು. ಈ ಸಂದರ್ಭ ಸಮುದಾಯದ ಹಿರಿಯ ಗಣ್ಯರನ್ನು ಗೌರವಿಸಿ, ಸನ್ಮಾನಿಸಲಾಯಿತು.