ಸಿದ್ದಾಪುರ, ಸೆ. ೧೯: ಸಿದ್ದಾಪುರ ಸಂತೆ ಮಾರುಕಟ್ಟೆಯಲ್ಲಿ ಗ್ರಾಮದ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಮಾರುಕಟ್ಟೆ ವ್ಯಾಪ್ತಿಯ ಸಮಸ್ಯೆಯ ಕುರಿತು ನೇರವಾಗಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ದೂರನ್ನು ಸ್ಥಳೀಯರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಅಧಿಕಾರಿಗಳೊಂದಿಗೆ ಮಾರುಕಟ್ಟೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಶಾಸಕರು ತ್ಯಾಜ್ಯ ರಾಶಿ, ಅಶುಚಿತ್ವವದಿಂದ ಕೂಡಿರುವ ಸಿದ್ದಾಪುರದ ಸಂತೆ ಮಾರುಕಟ್ಟೆಯ ದೃಶ್ಯ ಕಂಡು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಜನವಸತಿ ಪ್ರದೇಶದ ಹಾಗೂ ಶಾಲೆಯ ಸಮೀಪದಲ್ಲಿನ ಅವ್ಯವಸ್ಥೆ ಬಗ್ಗೆ ಆಕ್ರೋಶಗೊಂಡ ಶಾಸಕರು ಕೂಡಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಐದು ದಿನಗಳಲ್ಲಿ ಇಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ಪ್ರೇಮ, ಉಪಾಧ್ಯಕ್ಷ ಪಳಣಿ ಸ್ವಾಮಿ ನೇತೃತ್ವದಲ್ಲಿ ಮಾರುಕಟ್ಟೆಯ ತ್ಯಾಜ್ಯಗಳನ್ನು ವಿಲೇವಾರಿ ಮಾಡಿದ್ದಾರೆ.