ಸೋಮವಾರಪೇಟೆ, ಸೆ. ೧೯: ಸಮೀಪದ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೨೭ ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೫ ಲಾಭಾಂಶ ನೀಡುವಂತೆ ತೀರ್ಮಾನಿಸಿತು.

ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಧರ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.

ಈಗಾಗಲೇ ಸಂಘದ ವತಿಯಿಂದ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಶೀಘ್ರವಾಗಿ ಕಟ್ಟಡದ ಕಾಮಗಾರಿ ಮುಗಿಸಿ ಸದಸ್ಯರ ಬಳಕೆಗೆ ನೀಡುವಂತೆ ಸಭೆ ತೀರ್ಮಾನಿಸಿತು. ಸರ್ಕಾರದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಶಾಖೆ ಪ್ರಾರಂಭಿಸಬೇಕು ಎಂಬ ಬೇಡಿಕೆಯಂತೆ ಬೆಟ್ಟದಳ್ಳಿಯಲ್ಲಿ ನೂತನವಾಗಿ ಶಾಖೆಯನ್ನು ಪ್ರಾರಂಭಿಸುವAತೆ ಸದಸ್ಯರು ಸೂಚಿಸಿದರು.

ಅಧ್ಯಕ್ಷ ಧರ್ಮಪ್ಪ ಮಾತನಾಡಿ, ಉತ್ತಮವಾಗಿ ಸಂಘದಲ್ಲಿ ವ್ಯವಹಾರ ನಡೆಯುತ್ತಿದ್ದು, ಎಲ್ಲ ಸದಸ್ಯರು ತಮ್ಮ ಕೃಷಿಗೆ ಬೇಕಾದ ಗೊಬ್ಬರ, ಕ್ರಿಮಿನಾಶಕ ಮತ್ತಿತರ ವಸ್ತುಗಳನ್ನು ಸಂಘದಲ್ಲಿಯೇ ಖರೀದಿಸುವುದರಿಂದ, ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ತಿಳಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ದೇಶ್‌ರಾಜ್, ನಿರ್ದೇಶಕರಾದ ಬಿ.ಈ. ಜಯೇಂದ್ರ, ಬಸವರಾಜು, ಕೆ.ಕೆ. ಗೋಪಾಲ್, ದಿನೇಶ್, ಚಂದ್ರಾವತಿ, ರಾಜೇಶ್, ಸೋಮಶೇಖರ್, ನಾರಾಯಣ ಪೂಜಾರಿ, ಗೌರಮ್ಮ ಹಾಗೂ ಕಾರ್ಯನಿರ್ವಹಣಾಧಿಕಾರಿ ಡಿ.ಪಿ. ಜೋಯಪ್ಪ ಇದ್ದರು.

ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.