ವೀರಾಜಪೇಟೆ, ಸೆ. ೧೯: ವೀರಾಜಪೇಟೆ ಪೆರುಂಬಾಡಿ ಪೊಲೀಸ್ ತನಿಖಾ ಕೇಂದ್ರದಿAದ ಸುಮಾರು ಮೂರು ಕಿ.ಮೀ. ಅಂತರದ ಅರಣ್ಯ ಪ್ರದೇಶದಲ್ಲಿ ಟ್ರಾಲಿ ಬ್ಯಾಗ್‌ವೊಂದರಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಾಕುಟ್ಟ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯದಲ್ಲಿದ್ದ ವೇಳೆ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ನಿಲಿ ಬಣ್ಣದ ಟ್ರಾಲಿ ಬ್ಯಾಗ್ ಗೋಚರಿಸಿದ್ದು ಅದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿದರು. ಮೃತ ದೇಹವು ೨೫ ರಿಂದ ೩೫ ವರ್ಷದೊಳಗಿನ ಮಹಿಳೆಯದ್ದಾಗಿದ್ದು, ೧೨ ರಿಂದ ೩೦ ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶವ ಪರೀಕ್ಷೆಯ ಬಳಿಕ ತಿಳಿದುಬಂದಿದೆ. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.