ಸೋಮವಾರಪೇಟೆ, ಸೆ. ೨೦ : ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಇಲ್ಲಿನ ಒಎಲ್‌ವಿ ಕಾನ್ವೆಂಟ್ ನಲ್ಲಿ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬಿಆರ್‌ಪಿ ಹೇಮಂತ್‌ಕುಮಾರ್ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮ ಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಸೂಕ್ತ ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶಾಂತ್‌ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ಬಿಇಓ ಮಂಜೇಶ್, ಒಎಲ್‌ವಿ ಕಾನ್ವೆಂಟ್ ಮುಖ್ಯ ಶಿಕ್ಷಕರಾದ ರಕ್ಷಿತಾ ಮತ್ತು ಜೋಸ್ನ, ಸೋಮವಾರಪೇಟೆ ಸಿಆರ್‌ಪಿ ಪ್ರೇಮ, ಶಾಂತಳ್ಳಿ ಸಿಆರ್‌ಪಿ ಚೈತ್ರ, ಗೌಡಳ್ಳಿ ಸಿಆರ್‌ಪಿ ದೇವರಾಜೇಗೌಡ ಇದ್ದರು.

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವುದು, ಚಿತ್ರಕಲೆ, ಛದ್ಮವೇಷ, ಅಭಿನಯ ಗೀತೆ, ನೈಜತೆ, ಸೃಜನಶೀಲತೆ, ನೈಸರ್ಗಿಕ ವಸ್ತು ಬಳಕೆ, ಭಕ್ತಿ ಗೀತೆ, ಆಶುಭಾಷಣ, ಕವನ ಅಥವಾ ಪದ್ಯ ವಾಚನ, ಮಿಮಿಕ್ರಿ, ಭಾಷಣ, ಜಾನಪದ ಗೀತೆ, ಭರತ ನಾಟ್ಯ, ಚಿತ್ರಕಲೆ, ಚರ್ಚಾ ಸ್ಪರ್ಧೆ, ರಂಗೋಲಿ, ಗಝಲ್, ಜಾನಪದ ನೃತ್ಯ, ಕ್ವಿಜ್ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು.