ಸುಳ್ಯ, ಸೆ. ೧೯: ಮಡಿಕೇರಿ ಮೂಲದ ವ್ಯಕ್ತಿಯೊಬ್ಬರಿಂದ ಆಟೋ ಚಾಲಕ ಮತ್ತವನ ಸಹಚರರು ೩.೫ ಲಕ್ಷ ರೂಪಾಯಿ ಹಣವನ್ನು ಲೂಟಿ ಮಾಡಿರುವ ಘಟನೆ ವರದಿಯಾಗಿದೆ. ತಡರಾತ್ರಿ ಮನೆಗೆ ಹೋಗುವುದಕ್ಕಾಗಿ ರಿಕ್ಷಾ ಏರಿದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಆಟೋದಿಂದ ಹೊರದಬ್ಬಿ ಲಕ್ಷಾಂತರ ರೂಪಾಯಿ ನಗದನ್ನು ದೋಚಿ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ.

ಹಣ ಕಳೆದುಕೊಂಡವರನ್ನು ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಕಾರುಗುಂದ ಗ್ರಾಮದ ದರ್ಶನ್ (೨೭) ಎಂದು ಗುರುತಿಸಲಾಗಿದ್ದು, ಇವರು ವೈಯಕ್ತಿಕ ಕೆಲಸದ ಕಾರಣದಿಂದ ಸೋಮವಾರ ಸುಳ್ಯಕ್ಕೆ ಬಂದಿದ್ದರು. ಈ ವೇಳೆ ವಾಪಸ್ ಮಡಿಕೇರಿಗೆ ಹೊರಡುವಾಗ ತಡರಾತ್ರಿ ಆಗಿದ್ದರಿಂದ ಸುಳ್ಯದ ಹಳೆಗೇಟ್ ಸಮೀಪದಿಂದ ಸುಳ್ಯದ ಬಸ್ ನಿಲ್ದಾಣಕ್ಕೆ ಬರುವುದಕ್ಕೆ ದರ್ಶನ್ ಆಟೋವೊಂದನ್ನು ಹತ್ತಿದ್ದಾರೆ. ಈ ವೇಳೆ ಆಟೋದ ಹಿಂಬದಿಯಲ್ಲಿ ಇಬ್ಬರು ಕುಳಿತಿದ್ದು ಆಟೋ ಚಾಲಕ ಸಹಿತ ಮೂವರಿದ್ದರು. ಆಟೋದಲ್ಲಿ ಹೋಗುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ಮೂವರೂ ಸೇರಿಕೊಂಡು ದರ್ಶನ್ ಅವರ ಮೇಲೆ ಹಲ್ಲೆ ನಡೆಸಿ ಅವರ ಕೈನಲ್ಲಿದ್ದ ಬ್ಯಾಗ್ ಅನ್ನು ಬಲವಂತದಿAದ ಕಿತ್ತುಕೊಂಡಿದ್ದಾರೆ.

ನಂತರ ಆಟೋದಿಂದ ಹೊರಕ್ಕೆ ತಳ್ಳಿ ಕತ್ತಲಿನಲ್ಲಿ ಪರಾರಿಯಾಗಿದ್ದಾರೆ. ಬ್ಯಾಗ್ ಒಳಗೆ ಸುಮಾರು ೩.೫ ಲಕ್ಷ ರೂ. ನಗದು ಇತ್ತು, ಅಲ್ಲದೆ ಎರಡು ಮೊಬೈಲ್, ದಾಖಲಾತಿ ಪತ್ರಗಳು ಕೂಡ ಇದ್ದವು ಎಂದು ತಿಳಿದು ಬಂದಿದೆ. ಕತ್ತಲಾಗಿದ್ದ ಕಾರಣಕ್ಕೆ ಗಾಬರಿಯಲ್ಲಿದ್ದ ದರ್ಶನ್‌ಗೆ ಸರಿಯಾಗಿ ಆಟೋ ನಂಬರ್ ನೋಡಲು ಸಾಧ್ಯವಾಗಿಲ್ಲ. ಕೂಡಲೇ ಅವರು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಬ್ ಇನ್ಸ್ಪೆಕ್ಟರ್ ಈರಯ್ಯ ಅವರು ಆಟೋ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಈಗಾಗಲೇ ಘಟನೆ ಸಂಬAಧ ಕೆಲ ಸುಳಿವು ಪಡೆದಿದ್ದೇವೆ. ಶೀಘ್ರದಲ್ಲಿ ಆರೋಪಿಗಳ ಬಂಧನವಾಗಲಿದೆ ಎಂದು ತಿಳಿಸಿದ್ದಾರೆ. -ಕೋವರ್ ಕೊಲ್ಲಿ ಇಂದ್ರೇಶ್