ಸುAಟಿಕೊಪ್ಪ, ಸೆ. ೨೦: ಮಕ್ಕಳ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು ಸಹಕಾರಿಯಾಗಿವೆ.
ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸ್ಪರ್ಧೆಯು ಉತ್ತಮ ವೇದಿಕೆ ಒದಗಿಸುತ್ತದೆ ಎಂದು ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಟಿ.ವಿ. ಶೈಲಾ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಸುಂಟಿಕೊಪ್ಪ ಕ್ಲಸ್ಟರ್ ಕೇಂದ್ರದ ವತಿಯಿಂದ ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯಲ್ಲಿ ಏರ್ಪಡಿಸಿದ್ದ ಸುಂಟಿಕೊಪ್ಪ ಕ್ಲಸ್ಟರ್ ಮಟ್ಟದ ಮಕ್ಕಳ ಪ್ರತಿಭಾ ಕಾರಂಜಿ, ಕಲೋತ್ಸವ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವ ಇಂತಹ ಸ್ಪರ್ಧೆಗಳಿಗೆ ನಾವೆಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಸಂಸ್ಕೃತ ವ್ಯಕ್ತಿಗಳನ್ನಾಗಿ ರೂಪಿಸಬೇಕಿದೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಖಜಾಂಚಿ ಪ್ರಕಾಶ್ ಮಾತನಾಡಿ, ಎಲ್ಲಾ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯನ್ನು ಗುರುತಿಸಲು ಈ ಸ್ಪರ್ಧೆಯು ಸಹಕಾರಿಯಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಸಹ ಕಾರ್ಯದರ್ಶಿ ಎಸ್.ಕೆ. ಸೌಭಾಗ್ಯ ಮಾತನಾಡಿ, ಮಕ್ಕಳು ಸ್ಪರ್ಧಾ ಮನೋಭಾವದಿಂದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್ಪಿ ಸೀಮಾ, ಇಂತಹ ಸ್ಪರ್ಧೆಗಳು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸುತ್ತವೆ ಎಂದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಹೆಚ್.ಎಸ್. ಉಮಾದೇವಿ, ಶಾಂತಿನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಮೇರಿ ಫಾತಿಮ, ಹಿರಿಯ ಶಿಕ್ಷಕಿಯರಾದ ಕವಿತಾ, ಮಮತ ಇತರರು ಇದ್ದರು.
ಸ್ಪರ್ಧೆಯಲ್ಲಿ ಕ್ಲಸ್ಟರ್ನ ಒಟ್ಟು ೨೨ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಛದ್ಮವೇಷ, ಚಿತ್ರಕಲೆ, ಕ್ಲೇ ಮಾಡೆಲಿಂಗ್, ಜಾನಪದ ಗೀತೆ, ಕವನ ವಾಚನ, ಜಾನಪದ ನೃತ್ಯ, ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆ ಮುಂತಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.