ಮಡಿಕೇರಿ, ಸೆ.೨೦: ಜಿಲ್ಲೆಯಾದ್ಯಂತ ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ, ಮೆದುಳುಜ್ವರ ಹಾಗೂ ಆನೆಕಾಲು ರೋಗಗಳ ಮುಂಜಾಗ್ರತಾ ಹಾಗೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ತಿಳಿಸಿದ್ದಾರೆ.

ಈಡಿಸ್ ಸೊಳ್ಳೆಗಳು ಹರಡುವ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ರೋಗವು ವೈರಾಣು ಸೋಂಕಾಗಿದ್ದು, ಇದಕ್ಕೆ ಯಾವುದೇ ನಿರ್ಧಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇರುವುದಿಲ್ಲ. ಆದರೆ ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಪಕ್ಷದಲ್ಲಿ ಡೆಂಗ್ಯೂ ಜ್ವರವು ಡೆಂಗ್ಯೂ ರಕ್ತಸ್ರಾವ ಜ್ವರ ಹಾಗೂ ಡೆಂಗ್ಯೂ ಆಘಾತ ಜ್ವರಕ್ಕೆ ತಿರುಗಿ ಮಾರಣಾಂತಿಕವಾಗಿ ಸಾವು ಸಂಭವಿಸಬಹುದು. ಆದ್ದರಿಂದ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣದಲ್ಲಿ ರೋಗ ಹರಡುವ ಈಡಿಸ್ ಸೊಳ್ಳೆಗಳ ನಿಯಂತ್ರಣವೇ ಅತೀ ಮುಖ್ಯ ವಿಧಾನವಾಗಿದ್ದು, ಈ ಸೊಳ್ಳೆಗಳು ಮನೆಗಳಲ್ಲಿನ ನೀರಿನ ಶೇಖರಣೆಗಳಲ್ಲಿ ಹಾಗೂ ಮನೆಗಳ ಸುತ್ತಮುತ್ತಲಿನ

(ಮೊದಲ ಪುಟದಿಂದ) ಪರಿಸರದಲ್ಲಿ ಮಳೆನೀರು ಸಂಗ್ರಹವಾಗುವ ತ್ಯಾಜ್ಯ ವಸ್ತುಗಳಲ್ಲಿ ಉತ್ಪತ್ತಿಯಾಗುವುದರಿಂದ ಇವುಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಪ್ರಸ್ತುತ ಮುಂಗಾರು ಸಮಯವಾಗಿದ್ದರೂ ಸಹ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಮನೆಯ ಹೊರಾಂಗಣದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ, ಅಲ್ಲದೇ ನೀರಿನ ಅಸಮರ್ಪಕ ಪೂರೈಕೆಯ ಪರಿಣಾಮ ಮನೆಗಳಲ್ಲಿ ಅಧಿಕವಾಗಿರುವ ನೀರಿನ ಸಂಗ್ರಾಹಕಗಳಲ್ಲಿ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದಕ್ಕೆ ಪೂರಕವಾಗಿ ತಾಪಮಾನದ ಏರಿಳಿತ, ಡೆಂಗ್ಯೂ ಹರಡುವ ಸೊಳ್ಳೆಗಳ ಜೀವಿತ ಅವಧಿಗೆ ಅನುಕೂಲಕರವಾಗಿದ್ದು, ಡೆಂಗ್ಯೂ ಜ್ವರ ಪ್ರಕರಣಕ್ಕೆ ಕಾರಣವಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ, ಮನೆಯಲ್ಲಿನ ಎಲ್ಲಾ ನೀರಿನ ಸಂಗ್ರಾಹಕಗಳು ಮತ್ತು ಮೇಲ್ಚಾವಣಿಯಲ್ಲಿರುವ ತೊಟ್ಟಿಯ ನೀರನ್ನು ಕನಿಷ್ಟ ವಾರಕ್ಕೊಮ್ಮೆ ಖಾಲಿಮಾಡಿ ಉಜ್ಜಿ ತೊಳೆದು ಒಣಗಿಸಿ ನೀರನ್ನು ಮತ್ತೆ ತುಂಬಿಸಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚಬೇಕು. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿನ ಒಡೆದ ಬಾಟಲಿ, ಟಿನ್ನು, ಟೈರು ಮತ್ತಿತರ ಘನತ್ಯಾಜ್ಯ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗದAತೆ ಎಚ್ಚರ ವಹಿಸುವುದು. ಯಾವಾಗಲು ಮೈತುಂಬಾ ಬಟ್ಟೆ ಧರಿಸಬೇಕು. ಹಗಲು ಹೊತ್ತಿನಲ್ಲಿ ನಿದ್ರಿಸುವ/ವಿಶ್ರಾಂತಿ ಪಡೆಯುವ ಗರ್ಭಿಣಿಯರು ಮಕ್ಕಳು ಮತ್ತು ವೃದ್ಧರು ತಪ್ಪದೇ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು ಎಂದು ತಿಳಿಸಿದ್ದಾರೆ.