ಚೆಯ್ಯಂಡಾಣೆ, ಸೆ. ೨೦: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೇಟಿ ನೀಡಿದರು.

ಚೇಲಾವರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರಾದ ಪಿ. ಕಿರಣ್ ಮಾತನಾಡಿ, ಜಲಪಾತ ವೀಕ್ಷಿಸಲು ದಿನನಿತ್ಯ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದು ಅವರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಪಾರ್ಕಿಂಗ್, ರಸ್ತೆ ಮತ್ತಿತ್ತರ ವ್ಯವಸ್ಥೆಯನ್ನು ಕಲ್ಪಿಸಿ ನಂತರ ಗೇಟ್ ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಇನ್ನೋರ್ವ ಗ್ರಾಮಸ್ಥ ನಂದಕುಮಾರ್ ಮಾತನಾಡಿ, ಚೇಲಾವರಕ್ಕೆ ಪ್ರವಾಸಿಗರು ಅಧಿಕವಾಗಿ ಆಗಮಿಸುತ್ತಾರೆ. ಕುಡಿದು ಮೋಜು ಮಸ್ತಿಯೊಂದಿಗೆ ಗ್ರಾಮಸ್ಥರ ಮೇಲೆ ದರ್ಪ ತೋರುತ್ತಾರೆ. ಕಂಡಕAಡಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ಹಾಕುತ್ತಾರೆ. ಆದ್ದರಿಂದ ಕೂಡಲೇ ಗೇಟ್ ನಿರ್ಮಿಸಿ ತಪಾಸಣೆ ನಡೆಸಿ ಪ್ರವಾಸಿಗರಿಗೆ ಆಗಮಿಸಲು ಅವಕಾಶ ನೀಡಬೇಕು ಎಂದು ಕೋರಿದರು.

ನರಿಯಂದಡ ಪ್ರೌಢ ಶಾಲೆಯ ಸಮೀಪದ ಚೇಲಾವರ ಪತ್ತೇಟಿ ರಸ್ತೆ, ಕೀಮಲೆಕಾಡು ಹಾಗೂ ಚೇಲಾವರ ಜಲಪಾತಕ್ಕೆ ಸಂಪರ್ಕಿಸುವ ರಸ್ತೆ ದಶಕಗಳಿಂದ ಹದಗೆಟ್ಟಿದೆ. ಪೊನ್ನೊಲ ಶಾಲೆಯ ಪಕ್ಕದಲ್ಲಿರುವ ಸೇತುವೆ ಕಿರಿದಾಗಿದ್ದು ವಾಹನ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಆದ್ದರಿಂದ ಈ ರಸ್ತೆಯನ್ನು ಹಾಗೂ ಸೇತುವೆಯನ್ನು ಸರಿಪಡಿಸುವಂತೆ ಗ್ರಾಮಸ್ಥರಾದ ಲಾಲು, ಲೋಕೇಶ್, ಜಗದೀಶ್, ಮೀನಾ ಮತ್ತಿತರರು ಶಾಸಕರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಮಾತನಾಡಿ, ಚೇಲಾವರಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಕಾರಣ ಗ್ರಾಮ ಪಂಚಾಯಿತಿ ಮುಂದಾಳತ್ವ ವಹಿಸಿ ಗೇಟ್ ನಿರ್ಮಿಸಲಾಗಿತ್ತು. ೩ ತಿಂಗಳಲ್ಲೇ ಗ್ರಾಮ ಪಂಚಾಯಿತಿಗೆ ಒಂದು ಲಕ್ಷ ದಷ್ಟು ಹಣ ವಾಹನ ಶುಲ್ಕದಿಂದ ವಸೂಲಾಗಿದ್ದು, ನಂತರ ಗ್ರಾಮಸ್ಥರು ಗೇಟ್‌ಗೆ ವಿರೋಧ ವ್ಯಕ್ತಪಡಿಸಿ ಗೇಟ್ ತೆರವುಗೊಳಿಸಿದರು. ಇದೀಗ ಪ್ರವಾಸಿಗರು ಮದ್ಯ, ಮಾದಕ ವಸ್ತುಗಳನ್ನು ತಂದು ಅಲ್ಲಲ್ಲಿ ಕಸ, ಪ್ಲಾಸ್ಟಿಕ್‌ಗಳನ್ನು ಹಾಕಿ ಅಶುಚಿತ್ವ ಉಂಟು ಮಾಡುತ್ತಿದ್ದು, ಕೂಡಲೇ ಗೇಟ್ ನಿರ್ಮಿಸಿದರೆ ಗ್ರಾಮ ಪಂಚಾಯಿತಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.

ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಗೇಟ್ ನಿರ್ಮಿಸಿದರೆ ಗ್ರಾ.ಪಂ.ಗೆ ಆರ್ಥಿಕ ಆದಾಯದೊಂದಿಗೆ ಗ್ರಾಮವು ಅಭಿವೃದ್ಧಿ ಆಗಲಿದೆ. ಆದ್ದರಿಂದ ಈ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ತೀರ್ಮಾನಿಸೋಣ ಎಂದರು.

ಇAದಿನ ಯುಗದಲ್ಲಿ ಪ್ರವಾಸೋದ್ಯಮ ಇಲ್ಲದಿದ್ದರೆ ಬದುಕಲು ಕಷ್ಟ; ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗುವುದು ಒಳಿತು. ಕಾಡಾನೆ ಸಮಸ್ಯೆ ಇಲ್ಲಿಗೆ ಮಾತ್ರ ಸೀಮಿತವಲ್ಲ; ಇದು ಜಿಲ್ಲೆ ಹಾಗೂ ರಾಜ್ಯದ ಸಮಸ್ಯೆ.

ಅರಣ್ಯ ಇಲಾಖೆ ಸಚಿವರು ಹಾಗೂ ಉನ್ನತಾಧಿಕಾರಿಗಳನ್ನು ಜಿಲ್ಲೆಗೆ ಕರೆಸಿ ಕಾಡಿನೊಳಗೆ ಅವರನ್ನು ಕರೆದುಕೊಂಡು ಹೋಗಿ ಜನರ ಸಮಸ್ಯೆಗಳನ್ನು ತಿಳಿಸುವಂತೆ ಕೆಲಸವನ್ನು ಈಗಾಗಲೇ ಮಾಡಿದ್ದೇನೆ. ರಸ್ತೆ ಅಗಲೀಕರಣಕ್ಕೆ ಸ್ಥಳಾವಕಾಶ ಕೊಟ್ಟರೆ ಖಂಡಿತ ರಸ್ತೆ ಅಭಿವೃದ್ಧಿಯಾಗಲಿದೆ. ಸೇತುವೆ ಮತ್ತು ಇತರ ಕಾಮಗಾರಿಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆಯಿತ್ತರು. ದಾನವಾಗಿ ಕೊಟ್ಟ ಅಂಗನವಾಡಿ ಜಾಗಕ್ಕೆ ಬೇಲಿ ಹಾಕಲಾಗಿದೆ. ಇದು ಸರಿಯಲ್ಲ. ಇದರಿಂದ ಅಭಿವೃದ್ಧಿ ಆಗುವುದಿಲ್ಲ ಎಂದರು.

ನAತರ ಚೇಲಾವರ ಜಲಪಾತ ಹಾಗೂ ಸಂಪರ್ಕ ಕಲ್ಪಿಸುವ ಕಿರಿದಾದ ಸೇತುವೆಯನ್ನು ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಇಂದು ಗ್ರಾಮಸ್ಥರ ಮನವಿ ಮೇರೆಗೆ ಚೇಲಾವರಕ್ಕೆ ಭೇಟಿ ನೀಡಿದ್ದು ಇಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇಲ್ಲಿನ ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸಂಘರ್ಷ ಉಂಟಾಗದ ರೀತಿಯಲ್ಲಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಈ ಸಂದರ್ಭ ಚೇಲಾವರ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ, ಗ್ರಾಮಸ್ಥರಾದ ಸೀತಾರಾಂ, ಮಾಚಮ್ಮ, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.