ಮಡಿಕೇರಿ, ಸೆ. ೨೦: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮೂಲಕ ನಡೆಸಲ್ಪಡುತ್ತಿರುವ ಪೆಟ್ರೋಲ್ ಬಂಕ್‌ನಲ್ಲಿ ಹೊಸದಾಗಿ ಗ್ಯಾಸ್ ಬಂಕ್ ಹಾಗೂ ವಿದ್ಯುತ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ ಅವರು ತಿಳಿಸಿದರು.

ಸಂಘದ ವಾರ್ಷಿಕ ಮಹಾಸಭೆ ತಾ. ೨೨ರಂದು ಬೆ. ೧೧ ಗಂಟೆಗೆ ಮಡಿಕೇರಿ ಕಾವೇರಿ ಹಾಲ್‌ನಲ್ಲಿ ನಡೆಯಲಿದೆ. ಸಂಘ ಪ್ರಸಕ್ತ ಸಾಲಿನಲ್ಲಿ ತನ್ನ ವಿವಿಧ ಚಟುವಟಿಕೆಗಳ ಮೂಲಕ ರೂ. ೩೮.೫೧ ಲಕ್ಷ ಆದಾಯಗಳಿಸಿದೆ ಎಂದು ಅವರು ನಗರದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರವಿತ್ತರು.

೧೯೯೪-೯೫ರ ಅವಧಿಯಲ್ಲಿ ಕಾಫಿ ಬೆಳೆ ಮಾರಾಟದಲ್ಲಿ ಉಂಟಾದ ವ್ಯತಿರಿಕ್ತ ಪರಿಣಾಮದಿಂದ ಸಂಘ ನಷ್ಟದ ಹಾದಿ ಹಿಡಿಯಿತು. ರೂ. ೨೧ ಕೋಟಿಯಿಂದ ಪ್ರಸಕ್ತ ರೂ. ೧೩.೪೨ ಕೋಟಿ ಕ್ರೋಢಿಕೃತ ನಷ್ಟದಲ್ಲಿದ್ದು, ತೀರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಸಂಘದಲ್ಲಿ ಒಟ್ಟು ೯೧೦೬ ಸದಸ್ಯರಿದ್ದು, ಒಟ್ಟು ರೂ. ೪.೩೨ ಲಕ್ಷ ಪಾಲು ಬಂಡಾವಳವಿದೆ. ಸಂಘವು ಹುಣಸೂರು ಹಾಗೂ ಹೆಬ್ಬಾಲೆಯಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿದ್ದು, ಹುಣಸೂರಿನಲ್ಲಿ ರೂ. ೨೫.೨೮ ಕೋಟಿ ವಹಿವಾಟು ನಡೆಸಿ ರೂ. ೩೬ ಲಕ್ಷ, ಹೆಬ್ಬಾಲೆಯಲ್ಲಿ ರೂ ೬ ಕೋಟಿ ವ್ಯವಹಾರ ನಡೆಸಿ ವಾರ್ಷಿಕ ರೂ. ೧೦ ಲಕ್ಷ ಆದಾಯ ಗಳಿಸಿದೆ. ಕಾಫಿಪುಡಿ ವ್ಯವಹಾರದಲ್ಲಿ ಒಟ್ಟು ೯೪೦೦ ಕೆಜಿ ಮಾರಾಟದಿಂದ ರೂ. ೫.೬೯ ಲಕ್ಷ ಲಾಭಾಂಶ ಪಡೆಯಲಾಗಿದೆ. ಜೇನು ತುಪ್ಪ ಮಾರಾಟದಿಂದ ರೂ. ೪೯ ಸಾವಿರ,

(ಮೊದಲ ಪುಟದಿಂದ) ಕಾಫಿ ಸಂಸ್ಕರಣದಿAದ ರೂ. ೩.೬೮ ಲಕ್ಷ, ಮಡಿಕೇರಿ, ಹುಣಸೂರು, ಹೆಬ್ಬಾಲೆಯಲ್ಲಿನ ಸಂಘದ ಕಟ್ಟಡಗಳ ಬಾಡಿಗೆಯಿಂದ ರೂ. ೧.೭ ಕೋಟಿ, ಹುಣಸೂರು, ಹೆಬ್ಬಾಲೆ ಉದ್ದಿಮೆಯ ವ್ಯಾಪಾರ ವಹಿವಾಟಿನಿಂದ ರೂ. ೫೧.೫೮ ಲಕ್ಷ ಆದಾಯ ಸಂಘಕ್ಕೆ ಬಂದಿದೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಅಸಲು ರೂ. ೨೩.೭೯ ಲಕ್ಷ ಹಾಗೂ ಬಡ್ಡಿ ೧೩.೫೨ ಲಕ್ಷ ಪಾವತಿಸಲಾಗಿದ್ದು, ಕೊರೊನಾ ಪರಿಸ್ಥಿತಿಯಿಂದ ಕಟ್ಟಡದ ಬಾಡಿಗೆ ವಸೂಲಾತಿ ಕಡಿಮೆಯಾಗಿತ್ತು. ಜೊತೆಗೆ ಸಂಘದಿAದ ಫಸಲು ಸಾಲ ಪಡೆದುಕೊಂಡು ಮರುಪಾವತಿಸದೆ ಇರುವ ೩೨ ಸದಸ್ಯರಿಂದ ಒಟ್ಟು ರೂ. ೩೪.೨೧ ಲಕ್ಷ ಅಸಲು ಹಾಗೂ ರೂ. ೨೭ ಲಕ್ಷ ಬಡ್ಡಿ ಬರಲು ಬಾಕಿ ಇದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಉಳಿಕೆ ರೂ. ೧.೩೮ ಕೋಟಿ, ಸರಕಾರಕ್ಕೆ ರೂ. ೧.೯೬ ಕೋಟಿ ಸಂದಾಯ ಮಾಡುವ ಜವಾಬ್ದಾರಿ ಸಂಘದ ಹೆಗಲ ಮೇಲಿದೆ ಎಂದು ಹೇಳಿದ ದೇವಯ್ಯ ಅವರು, ಕಾಫಿ ಮಂಡಳಿ ವ್ಯಾಜ್ಯಕ್ಕೆ ಸಂಬAಧಿಸಿದAತೆ ಸುಮಾರು ರೂ. ೬ ಕೋಟಿಯಷ್ಟು ಬಡ್ಡಿ ಪಾವತಿಸಲು ನ್ಯಾಯಾಲಯದ ಆದೇಶವಿತ್ತು. ಈ ಬಗ್ಗೆ ಸಂಘ ಉಚ್ಛನ್ಯಾಯಾಲಯದಲ್ಲಿ ರೂ. ೫೦ ಲಕ್ಷ ಠೇವಣಿಯಿಟ್ಟು ತಡೆಯಾಜ್ಞೆ ತರಲಾಗಿದ್ದು, ಇತ್ಯರ್ಥಕ್ಕೆ ಬಾಕಿ ಇದೆ ಎಂದು ಮಾಹಿತಿ ಒದಗಿಸಿದರು.

ಮಡಿಕೇರಿಯ ಸಂಘದ ಕಟ್ಟಡವನ್ನು ದುರಸ್ತಿ ಪಡಿಸಲಾಗಿದೆ. ಖಾಲಿ ಹುದ್ದೆಗಳಿಗೆ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಅಮ್ಮತ್ತಿಯಲ್ಲಿ ೧೦ ಸೆಂಟ್ ಖಾಲಿ ನಿವೇಶನದಲ್ಲಿ ಸುಸಜ್ಜಿತ ವಾಣಿಜ್ಯ ನಿರ್ಮಾಣದ ಗುರಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಚಿಂತನೆಗಳಿವೆ ಎಂದು ನುಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಪಿ. ಪೊನ್ನಪ್ಪ, ನಿರ್ದೇಶಕರುಗಳಾದ ಎಸ್.ಸಿ. ಸುರೇಶ್, ಪಾಸುರ ಕಾವೇರಪ್ಪ, ಕೆ.ಎನ್. ಸಂದೀಪ್, ಉಪಕಾರ್ಯದರ್ಶಿ ಅಪ್ಪಚ್ಚೀರ ಎಂ. ದೇಚಮ್ಮ ಹಾಜರಿದ್ದರು.