ಗೋಣಿಕೊಪ್ಪಲು, ಸೆ. ೨೦: ವ್ಯಕ್ತಿಯೊಬ್ಬರು ಮನೆಯ ಸಮೀಪದ ಕೊಟ್ಟಿಗೆಯಲ್ಲಿದ್ದ ತಮ್ಮ ಎರಡು ಹಸುಗಳನ್ನು ಭತ್ತದ ಗದ್ದೆಯಲ್ಲಿ ಕಟ್ಟಿ ಕೈ ತೊಳೆಯಲು ಅಲ್ಲಿಯೆ ಇದ್ದಂತಹ ಕೆರೆಗೆ ತೆರಳಿದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಪೊನ್ನಂಪೇಟೆ ತಾಲೂಕಿನ ಚಿಕ್ಕ ಮಂಡೂರು ಗ್ರಾಮದಲ್ಲಿ ನಡೆದಿದೆ. ಅಜ್ಜಿಕುಟ್ಟಿರ ಭೀಮಯ್ಯ (೬೭) ಮೃತ ದುರ್ದೈವಿ.

ಚಿಕ್ಕಮಂಡೂರು ಗ್ರಾಮದ ಭೀಮಯ್ಯ ಮುಂಜಾನೆ ಮನೆಯಿಂದ ಹೊರಟು ಕೊಟ್ಟಿಗೆಯಲ್ಲಿದ್ದ ಹಸುವನ್ನು ಎಂದಿ ನಂತೆ ಸಮೀಪದ ಭತ್ತದ ಗದ್ದೆಯಲ್ಲಿ ಕಟ್ಟಲು ತೆರಳಿದ್ದರು. ಜಿಟಿಜಿಟಿ ಮಳೆ ಸುರಿದ ಹಿನ್ನೆಲೆಯಲ್ಲಿ ನಡೆ ದಾಡುವ ದಾರಿಯು ಕೂಡ ಕೆಸರಾಗಿತ್ತು.

(ಮೊದಲ ಪುಟದಿಂದ) ಈ ಕಾರಣದಿಂದ ಹಸುಗಳನ್ನು ಕಟ್ಟಿದ ಬಳಿಕ ಕೈ ಕಾಲು ತೊಳೆಯಲು ಸಮೀಪದಲ್ಲಿದ್ದ ಕೆರೆಯ ಬಳಿ ತೆರಳಿದ್ದಾರೆ. ಈ ವೇಳೆ ಕೈ ತೊಳೆಯುವ ಸಂದರ್ಭ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಮುಳುಗಿ ಸಾವನ್ನಪ್ಪಿದ್ದಾರೆ.

ಹಸುಗಳನ್ನು ಕಟ್ಟಲು ತೆರಳಿದ್ದ ಮನೆಯ ಯಜಮಾನ ಸಮಯ ಕಳೆದರೂ ಮನೆಯತ್ತ ಆಗಮಿಸದ ಹಿನ್ನೆಲೆಯಲ್ಲಿ ಮನೆಯವರು ಅನುಮಾನಗೊಂಡು ಭತ್ತದ ಗದ್ದೆಯ ಬಳಿ ತೆರಳಿದಾಗ ಸಮೀಪದ ಕೆರೆಯಲ್ಲಿ ಭೀಮಯ್ಯ ಅವರು ಮುಳುಗಿ ಸಾವನ್ನಪ್ಪಿರುವ ವಿಷಯ ತಿಳಿದು ಬಂದಿದೆ. ಸುದ್ದಿ ತಿಳಿದ ಶ್ರೀಮಂಗಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆರೆಯಲ್ಲಿದ್ದ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜ್ಜಿಕುಟ್ಟಿರ ಭೀಮಯ್ಯ ಅವರು ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.