ಮಡಿಕೇರಿ, ಸೆ. ೧೭: ಪತ್ರಿಕಾ ವಿತರಕರನ್ನು ಪಿಎಂ ಸ್ವನಿಧಿ ಯೋಜನೆ ವ್ಯಾಪ್ತಿಗೆ ಸೇರಿಸಲು ಸಹಕರಿಸಿದ ಹಿನ್ನೆಲೆಯಲ್ಲಿ ಪಿಎಂ ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ಎ. ರಾಮದಾಸ್ ಅವರನ್ನು ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಸನ್ಮಾನಿಸಿ ಗೌರವಿಸಿತು.
ರಾಮದಾಸ್ ಅವರನ್ನು ಮೈಸೂರಿನಲ್ಲಿ ಭೇಟಿಯಾದ ಸಂದರ್ಭ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದರೆಮೋತಿ, ಕೊಡಗು ಜಿಲ್ಲಾಧ್ಯಕ್ಷ ಟಿ.ಜಿ.ಸತೀಶ್, ನಿರ್ದೇಶಕ ಕೆ.ಎನ್. ಶಿವಪ್ರಸಾದ್, ವಿವಿಧ ಜಿಲ್ಲೆಗಳ ಪದಾಧಿಕಾರಿಗಳಾದ ಕೃಷ್ಣ ಬೆಂಗಳೂರು, ಸತೀಶ್ ಶಿವಮೊಗ್ಗ, ಕೃಷ್ಣ ದಾವಣಗೆರೆ, ಸಂತೋಷ್ ಹಾಸನ, ಸುನಿಲ್ ಹಾಸನ ಮತ್ತಿತರರು ಹಾಜರಿದ್ದರು.
ಪಿಎಂ ಸ್ವನಿಧಿ ಯೋಜನೆ ವ್ಯಾಪ್ತಿಗೆ ಪತ್ರಿಕಾ ವಿತರಕರನ್ನು ಸೇರ್ಪಡೆ ಮಾಡಿದ್ದು, ಈ ವರ್ಗದವರು ಸೇರಿದಂತೆ ಬೀದಿ ಬದಿ ವ್ಯಾಪಾರಿಗಳು ಒಳಗೊಂಡ ಅಸಂಘಟಿತ ಕ್ಷೇತ್ರದಲ್ಲಿರುವವರಿಗೆ ಕಿರು ಸಾಲ ಸೌಲಭ್ಯ ಕಲ್ಪಿಸಲು ಸೆ.೧೬ರಿಂದ ಅ.೧೫ರ ವರೆಗೆ ಮಾಸಾಚರಣೆ ಕೈಗೊಳ್ಳಲಾಗಿದೆ ಎಂದು ಟಿ.ಜಿ. ಸತೀಶ್ ತಿಳಿಸಿದರು.
ಪಿಎಂ ಸ್ವನಿಧಿ ಹಾಗೂ ಸ್ವನಿಧಿ ಸೆ ಸಮೃದ್ಧಿ ಯೋಜನೆಗಳಡಿ ಎಲ್ಲಾ ಎಂಟು ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಲ್ಪಿಸಲು ಡಿಜಿಟಲ್ ವಹಿವಾಟನಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ. ಪ್ರತೀ ಬ್ಯಾಂಕಿನ ಶಾಖಾ ಮಟ್ಟದಲ್ಲಿ ಸಾಲ ಮೇಳ ಆಯೋಜಿಸುವುದು, ಅರ್ಹ ಫಲಾನುಭವಿಗಳಿಗೆ ಗುರುತಿನಚೀಟಿ ಹಾಗೂ ಮಾರಾಟ ಸದಸ್ಯರಿಗೆ ಪ್ರಮಾಣಪತ್ರ ವಿತರಿಸುವುದು ಸೇರಿದಂತೆ ವಿವಿಧ ಪ್ರಕ್ರಿಯೆಗಳು ನಡೆಯಲಿದೆ. ರಿಯಾಯಿತಿ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಪಿಎಂ ಸುರಕ್ಷಾ ಭೀಮಾ ಯೋಜನೆಯಡಿ ಅಪಘಾತದಿಂದ ಆಗುವ ಮರಣಕ್ಕೆ ರೂ.೨ ಲಕ್ಷ ಮತ್ತು ಅಂಗವಿಕಲತೆಗೆ ರೂ.೧ ಲಕ್ಷ ದೊರೆಯಲಿದೆ. ಜೀವನ ಜ್ಯೋತಿ ಯೋಜನೆಯಡಿ ಸಾಧಾರಣ ಸಾವಿಗೆ ಯಾವುದೇ ವೈದ್ಯಕೀಯ ದಾಖಲೆ ಇಲ್ಲದೆ ರೂ.೨ಲಕ್ಷ ಸಿಗಲಿದೆ. ಇನ್ನೂ ಕೆಲವು ಸೌಲಭ್ಯಗಳಿದ್ದು, ಪಿಎಂ ಸ್ವನಿಧಿ ಯೋಜನೆಯಡಿ ಪತ್ರಿಕಾ ವಿತರಕರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಸತೀಶ್ ತಿಳಿಸಿದ್ದಾರೆ.