ಪೊನ್ನಂಪೇಟೆ, ಸೆ. ೧೬: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ನೀಡಲಾಗುವ ಈ ಸಾಲಿನ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-೨೦೨೩ಕ್ಕೆ ಮಡಿಕೇರಿಯ ರೊಲೆನ್ಸಿಯಾ ಬಿಯಾನ್ ರಾಯ್ ಮತ್ತು ವೀರಾಜಪೇಟೆಯ ಟಿ.ವಿ ವೈಷ್ಣವಿ ಆಯ್ಕೆಯಾಗಿದ್ದಾರೆ.

ಈ ವಿಶೇಷ ಪ್ರತಿಭಾ ಪುರಸ್ಕಾರವನ್ನು ಎನ್.ಸಿ.ಟಿ. ಗ್ರೂಪ್ ಮಾಲೀಕರಾದ ಮುಂಬೈನ ಉದ್ಯಮಿ ಅಕ್ಕಳತಂಡ ಎಸ್. ಮೊಯಿದು ಅವರು ತಮ್ಮ ಸಹೋದರ ದಿ.ಅಕ್ಕಳತಂಡ ಎಸ್. ಹಂಸ ಅವರ ಸ್ಮರಣಾರ್ಥವಾಗಿ ಕಳೆದ ವರ್ಷದಿಂದ ಪ್ರಾಯೋಜಿಸುತ್ತಿದ್ದು, ರೂ. ಹತ್ತು ಸಾವಿರ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಂಸನಾ ಪತ್ರವನ್ನು ಒಳಗೊಂಡಿರುತ್ತದೆ.

ಕೆ.ಎA.ಎ. ವಿಶೇಷ ಪ್ರತಿಭಾ ಪುರಸ್ಕಾರ-೨೦೨೩ನ್ನು ೨೦೨೨-೨೩ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವೀರಾಜಪೇಟೆಯ ಸೆಂಟ್ ಆನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ವಿ. ವೈಷ್ಣವಿ ಮತ್ತು ಮಡಿಕೇರಿಯ ಸಂತ ಮೈಕಲರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೋಲೆನ್ಸಿಯಾ ಬಿಯಾನ್ ರಾಯ್ ಅವರಿಗೆ ತಾ. ೨೪ ರಂದು ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ವೀರಾಜಪೇಟೆಯ ಸೆಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-೨೦೨೩ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಗುತ್ತದೆ ಎಂದು ಕೆ.ಎಂ.ಎ. ಪ್ರಕಟಣೆಯಲ್ಲಿ ತಿಳಿಸಿದೆ.