ಅನಿಲ್ ಎಚ್.ಟಿ.

ಮಡಿಕೇರಿ, ಸೆ. ೧೭: ಜಾಗತಿಕ ಟೆನ್ನಿಸ್ ಕ್ರೀಡೆಯಲ್ಲಿ ಕೊಡಗಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿರುವ ಕಾವೇರಿ ವರಪುತ್ರ ಮಚ್ಚಂಡ ರೋಹನ್ ಬೋಪಣ್ಣ ೨೨ ವರ್ಷಗಳ ಡೇವಿಸ್ ಕಪ್ ಟೆನ್ನಿಸ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಜಗತ್ತಿನ ಪ್ರತಿಷ್ಠಿತ ಡೇವಿಸ್ ಟೆನ್ನಿಸ್ ಅಂಗಳದಲ್ಲಿ ರೋಹನ್ ಮಿಂಚು ಕಾಣಿಸಲಾರದು.

ಲಖನೌದ ವೈಜಯಂತ್ ಮಿನಿ ಸ್ಟೇಡಿಯಂನಲ್ಲಿ ಭಾನುವಾರ ಜರುಗಿದ ಭಾರತ ಮತ್ತು ಮೊರಕ್ಕೊ ನಡುವಿನ ಪಂದ್ಯಾಟದಲ್ಲಿ ರೋಹನ್ ಬೋಪಣ್ಣ ತನ್ನ ನಿವೃತ್ತಿ ಘೋಷಿಸಿದರು. ಈ ಪಂದ್ಯಾಟವನ್ನು ರೋಹನ್ ಅವರ ಪೋಷಕರಾದ ಮಚ್ಚಂಡ ಬೋಪಣ್ಣ, ಮಲ್ಲಿಕಾ ಸೇರಿದಂತೆ ಕುಟುಂಬಸ್ಥರು ಸಾಕ್ಷೀಕರಿಸಿದರು.

ಪಂದ್ಯಾವಳಿಗೆ ಮುನ್ನ ಡೇವಿಸ್ ಕಪ್ ಗೆ ವಿದಾಯ ಹೇಳುತ್ತಿರುವ ರೋಹನ್ ಬೋಪಣ್ಣ ಅವರನ್ನು ಭಾರತೀಯ ಟೆನ್ನಿಸ್ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.

ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಪಕ್ಕದಲ್ಲಿಯೇ ಬೋಪಣ್ಣ ದಂಪತಿ ಮನೆ. ಶಾಲೆ ಪಕ್ಕದಲ್ಲಿಯೇ ಇರುವ ಮಾದಾಪುರ ಟೆನ್ನಿಸ್ ಕ್ಲಬ್‌ನ ಟೆನ್ನಿಸ್ ಕೋರ್ಟ್ನಲ್ಲಿಯೇ ರೋಹನ್ ಪ್ರಾಥಮಿಕವಾಗಿ ಟೆನ್ನಿಸ್ ಪಂದ್ಯಾಟ ಆಡಿದ್ದು. ಇಲ್ಲಿಯೇ ಕೆಲವರ್ಷಗಳ ಹಿಂದೆ ಮತ್ತೋರ್ವ ಕ್ರೀಡಾತಾರೆ ಸಾನಿಯಾ ಮಿರ್ಜಾ ಕೂಡ ರೋಹನ್ ಜತೆ ಟೆನ್ನಿಸ್ ಆಡಿದ್ದು ಸುದ್ದಿಯಾಗಿತ್ತು. ಬಾಲ್ಯದಲ್ಲಿ ಹಾಕಿ, ಫುಟ್ಬಾಲ್ ಕ್ರೀಡೆಯತ್ತ ಒಲವು. ಆದರೆ ೧೧ ವರ್ಷಕ್ಕೆ uಟಿಜeಜಿiಟಿeಜ ಮನೆ ಪಕ್ಕದಲ್ಲಿಯೇ ಇದ್ದ ಟೆನ್ನಿಸ್ ಕೋರ್ಟ್ನ ವ್ಯಾಮೋಹ ಹಿನ್ನಲೆ ಟೆನ್ನಿಸ್ ಬ್ಯಾಟ್ ಹಿಡಿದ ರೋಹನ್ ಮತ್ತೆ ಸವಾಲಿನ ಹಾದಿಯಲ್ಲಿಯೇ ಸಾಗಿ ಇದೀಗ ಸಾಧನೆಯ ಉತ್ತುಂಗಕ್ಕೇರಿದರು. ಈ ಕ್ರೀಡಾ ಹಾದಿಯಲ್ಲಿ ನಲಿವಿಗಿಂತ ಸವಾಲಿನ ನೋವು ಎದುರಿಸಿದ್ದೇ ಹೆಚ್ಚು. ಹಾಗೆ ನೋಡಿದರೆ ರೋಹನ್‌ನ ಅತ್ಯುತ್ತಮ ಕ್ರೀಡಾ ಜೀವನ ಪ್ರಾರಂಭವಾದದ್ದೇ ೩೫ ವರ್ಷದ ತರುವಾಯ. ಇದೀಗ ೪೦ ವರ್ಷದ ರೋಹನ್ ಅತ್ಯುತ್ತಮ ಸಾಧಕ ಎಂಬ ಹಿರಿಮೆಯೊಂದಿಗೆ ಟೆನ್ನಿಸ್‌ನ ಮುಖ್ಯ ವಾಹಿನಿಯಿಂದ ದೂರವಾಗುತ್ತಿದ್ದಾರೆ.

ಸಾದಾ ಸೀದಾ ಸರಳ ಜೀವನ ಶೈಲಿಯ ಕುಟುಂಬ ಬೋಪಣ್ಣ ದಂಪತಿಯದ್ದು. ಇವರ ಪುತ್ರ ರೋಹನ್ ಕೂಡ ಅತ್ಯಂತ ವಿನಯ ವಂತ. ಖ್ಯಾತಿ ಹೆಗಲಿಗೇರಿದರೂ ಒಂದು ಚೂರೂ ಅಹಂ ಬೆಳೆಸಿಕೊಳ್ಳದೇ ಮಿತಭಾಷಿಯಾಗಿ ಟೆನ್ನಿಸ್ ಕ್ರೀಡೆಯನ್ನೇ ಉಸಿರಾಗಿಸಿ ಕೊಂಡು ಜಗದಗಲ ಸುತ್ತಿ ಕೊಡಗಿನ ಕೀರ್ತಿಯ ಕಂಪು ಪಸರಿಸಿದ ಹಿರಿಮೆಯೂ ರೋಹನ್ ಅವರದ್ದು.

೨೦೦೨ರಲ್ಲಿ ಮೊದಲ ಬಾರಿಗೆ ಡೇವಿಸ್ ಕಪ್‌ಗೆ ಎಂಟ್ರಿ ಕೊಟ್ಟಿದ್ದ ರೋಹನ್ ಬೋಪಣ್ಣ ಈವರೆಗೆ ೩೨ ಪಂದ್ಯಾಟವಾಡಿದ್ದಾರೆ. ಈ ಪೈಕಿ ೧೦ ಸಿಂಗಲ್ಸ್ ಸೇರಿದಂತೆ ೨೨ ಪಂದ್ಯಾಟದಲ್ಲಿ ಗೆಲವು ಸಾಧಿಸಿದ್ದಾರೆ. ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ವಿಶ್ವ ಶ್ರೇಯಾಂಕದಲ್ಲಿ ೩ ನೇ ಸ್ಥಾನದಲ್ಲಿಯೂ ವಿಜೃಂಭಿಸಿ ರೋಹನ್ ಪ್ರಸ್ತುತ ೭ನೇ ಸ್ಥಾನದಲ್ಲಿದ್ದಾರೆ.

ಡೆವಿಸ್ ಕಪ್‌ಗೆ ವಿದಾಯ ಹೇಳಿದರೂ ರೋಹನ್ ಬೋಪಣ್ಣ ಟೆನ್ನಿಸ್‌ನ ಇತರ ಶ್ರೇಯಾಂಕಿತ ಕ್ರೀಡೆಯಲ್ಲಿ ಮುಂದುವರೆಯಲಿದ್ದಾರೆ. ಎಟಿಪಿ ಟೂರ್ನಿಗಳಲ್ಲಿ ರೋಹನ್ ಮುಂದಿನ ದಿನಗಳಲ್ಲಿ ತನ್ನ ಮಿಂಚಿನಾಟ ಮುಂದುವರೆಸಲಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಟೆನ್ನಿಸ್ ಗಾಗಿ ಚಿನ್ನದ ಪದಕ ಪಡೆದಿರುವ ರೋಹನ್, ಇದೇ ೧೯ ರಂದು ಬೀಜಿಂಗ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೂ ತೆರಳುತ್ತಿದ್ದಾರೆ.

ಪಾಕಿಸ್ತಾನದದ ಟೆನ್ನಿಸ್ ತಾರೆ ಅಸಿಯಂ ಉಲ್ ಹಕ್ ಜತೆಗಿನ ಡೇವಿಸ್ ಕಪ್‌ನ ಡಬಲ್ಸ್ ಜತೆಯಾಟ ಅತ್ಯುತ್ತಮ ಜೋಡಿ ಎಂಬ ಖ್ಯಾತಿ ಪಡೆದಿತ್ತು. ಇಂಡೋ ಪಾಕ್ ಎಕ್ಸ್ಪ್ರೆಸ್ ಎಂಬ ಹೆಸರನ್ನೂ ಈ ಅಪರೂಪದ ಜೋಡಿ

(ಮೊದಲ ಪುಟದಿಂದ) ೨೦೧೦ ರಿಂದ ೧೪ ರವರೆಗೆ ೧೦ ವರ್ಷಗಳ ಕಾಲ ಪಡೆದಿತ್ತು. ಟೆನ್ನಿಸ್ ಕ್ರೀಡೆಯಲ್ಲಿ ಪ್ರತಿಷ್ಠಿತ ಎಟಿಪಿ ೧೦೦೦ ಮಾಸ್ಟರ್ ಪ್ರಶಸ್ತಿಯನ್ನು ತನ್ನ ೪೩ ನೇ ವಯಸ್ಸಿನಲ್ಲಿ ಪಡೆಯುವ ಮೂಲಕ ರೋಹನ್ ಬೋಪಣ್ಣ, ಈ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು.

ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ, ಮಹೇಶ್ ಭೂಪತಿ ಜೋಡಿಯಾಗಿಯೂ ರೋಹನ್ ಬೋಪಣ್ಣ, ಡೇವಿಸ್ ಟೆನ್ನಿಸ್ ಕೋರ್ಟ್ನಲ್ಲಿ ಕಂಗೊಳಿಸಿದ್ದು ಟೆನ್ನಿಸ್ ಲೋಕದ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

೨೦೧೦ರಲ್ಲಿ ಚಾಂಪಿಯನ್ ಆಫ್ ಪೀಸ್, ೨೦೦೫ರಲ್ಲಿ ಕರ್ನಾಟಕ ಕ್ರೀಡಾ ಇಲಾಖೆಯ ಪ್ರತಿಷ್ಟಿತ ಏಕಲವ್ಯ ಪ್ರಶಸ್ತಿಯೂ ರೋಹನ್ ಬೋಪಣ್ಣ ಪಾಲಾಗಿದೆ.

ಟೆನ್ನಿಸ್ ಕಾಶಿ ವಿಂಬಲ್ಡನ್‌ನÀಲ್ಲಿ ಟೆನ್ನಿಸ್ ಮೂಲಕ ಕಾಫಿ ನಾಡು ಕೊಡಗಿನ ಹಿರಿಮೆ ಎತ್ತಿ ಹಿಡಿದ ರೋಹನ್, ಕೊಡಗಿನಲ್ಲಿಯೂ ಸದ್ದಿಲ್ಲದೇ ತನ್ನ ಸಾಮಾಜಿಕ ಸೇವಾ ಕಾರ್ಯವನ್ನು ನಿರ್ವಹಿಸುತ್ತಾ ಬರುತ್ತಿದ್ದಾರೆ. ವಿಶೇಷ ಚೇತನ ಮಕ್ಕಳ ಶಾಲೆಗೆ ಟೆನ್ನಿಸ್‌ನಲ್ಲಿ ಲಭಿಸಿದ ಬಹುಮಾನದ ಮೊತ್ತದಲ್ಲಿ ಸಿಂಹಪಾಲನ್ನು ನೀಡುತ್ತಾ ಬಂದಿದ್ದಾರೆ. ಅಂತೆಯೇ ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ೪೦ ಮಕ್ಕಳ ಶಿಕ್ಷಣದ ಶುಲ್ಕವನ್ನು ಕೂಡ ರೋಹನ್ ಬೋಪಣ್ಣ ಸ್ವಂತ ವೆಚ್ಚದಲ್ಲಿ ಭರಿಸುತ್ತಿದ್ದಾರೆ. ಇಂಥ ಸಾಮಾಜಿಕ ಸೇವಾ ಕಾರ್ಯಗಳನ್ನು ಪ್ರಚಾರದ ಹಂಗಿಲ್ಲದೇ ಅವರು ನಿರ್ವಹಿಸುತ್ತಾ ಬರುತ್ತಿರುವುದೂ ಶ್ಲಾಘನೀಯ.

ಬೆಂಗಳೂರಿನಲ್ಲಿ ಸೈರಸ್ ಹೆಸರಿನ ರೆಸ್ಟೋರೆಂಟ್ ನ ಪಾಲುದಾರರಾಗಿರುವ ರೋಹನ್ ಚೋಡಾಮಾಡ, ಸುಪ್ರಿಯಾರನ್ನು ವಿವಾಹವಾಗಿದ್ದಾರೆ. ರೋಹನ್ ಬೋಪಣ್ಣ ಟೆನ್ನಿಸ್ ಡೆವಲಪ್‌ಮೆಂಟ್ ಅಕಾಡೆಮಿಯ ನಿರ್ದೇಶಕಿಯಾಗಿದ್ದ ದಂಪತಿಗೆ ತ್ರಿದಾ ಬೋಪಣ್ಣ ಎಂಬ ಪುತ್ರಿಯಿದ್ದಾಳೆ. ಮಚ್ಚಂಡ ಬೋಪಣ್ಣ ಮಲ್ಲಿಕಾ ದಂಪತಿ, ತಮ್ಮ ಪ್ರತಿಭಾವಂತ ಪುತ್ರನನ್ನು ವಿಶ್ವ ಟೆನ್ನಿಸ್ ಲೋಕದಲ್ಲಿ ಸ್ಟಾರ್ ಆಗಿ ಮಾಡಲು ಪಟ್ಟ ಕಷ್ಟಗಳು ಹಲವಾರು. ಟೆನ್ನಿಸ್ ಕ್ರೀಡೆಯ ಪ್ರಾರಂಭಿಕ ವರ್ಷಗಳಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ವಿದೇಶಗಳಲ್ಲಿ ನಡೆಯುತ್ತಿದ್ದ ಟೆನ್ನಿಸ್ ಪಂದ್ಯಾಟಗಳಿಗೆ ಮಗನನ್ನು ಕಳುಹಿಸಿ ಗೆಲುವೋ, ಸೋಲೋ ..ಮಗನನ್ನು ಕ್ರೀಡಾಲೋಕದಲ್ಲಿ ಉತ್ತುಂಗಕ್ಕೇರಿಸಲು ಈ ದಂಪತಿ ಪಟ್ಟ ಶ್ರಮ ನಿಜಕ್ಕೂ ಆದರ್ಶವಾಗಿದೆ. ಮಾದರಿಯಾಗಿದೆ. ಪಟ್ಟ ಕಷ್ಟಗಳಿಗೆ, ಎದುರಿಸಿದ ಸವಾಲುಗಳಿಗೆ, ಆರ್ಥಿಕ ಹೊರೆಗಳಿಗೆ ಕೊನೆಗೂ ಅದ್ಬುತ ಸಾಧನೆಯ ಪ್ರತಿಫಲ ದೊರಕಿದೆ

ಮಚ್ಚಂಡ ಬೋಪಣ್ಣ ರೋಹನ್ ಟೆನ್ನಿಸ್ ಲೋಕದ ಧ್ರುವತಾರೆಯಾಗಿ ಹೊರಹೊಮ್ಮಿದ್ದಾರೆ. ಅಪ್ಪ ಅಮ್ಮನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದಂತಾ ಗಿದೆ. ಇದೀಗ ಅತ್ಯುತ್ತಮ ಸಾಧನೆ ಯೊಂದಿಗೆ ಟೆನ್ನಿಸ್ ಕ್ರೀಡೆಯ ಮುಖ್ಯವಾಹಿನಿಯಿಂದ ದೂರವಾಗು ತ್ತಿರುವ ಮಚ್ಚಂಡ ರೋಹನ್ ಬೋಪಣ್ಣ ಅವರಿಗೆ ಕೊಡಗಿನ ಜನತೆಯೆ ಹೆಮ್ಮೆಯ ಪ್ರಶಂಸೆ ದೊರಕಲೇಬೇಕಾಗಿದೆ.

ಕೊಡಗಿನ ಹೆಮ್ಮೆಯಾಗಿರುವ ರೋಹನ್ ಬೋಪಣ್ಣ.. ನೀವು ಎಂದೆA ದಿಗೂ ಕ್ರೀಡಾಲೋಕದ ತಾರೆ.. ನಿಜವಾಗಿಯೂ ಸ್ಪೋರ್ಟ್ಸ್ ಸ್ಟಾರ್.