ಸೋಮವಾರಪೇಟೆ, ಸೆ. ೧೫: ರೈತರು ಕೃಷಿಯಲ್ಲಿ ಸುಧಾರಿತ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಲಾಭ ಪಡೆಯುವತ್ತ ಗಮನ ಹರಿಸಬೇಕು ಎಂದು ಶಾಸಕ ಡಾ. ಮಂಥರ್ಗೌಡ ಕರೆ ನೀಡಿದರು.
ಇಲ್ಲಿನ ಸಹಕಾರ ಯೂನಿಯನ್ ಕಟ್ಟಡಕ್ಕೆ ಸ್ಥಳಾಂತರಗೊAಡಿರುವ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದ್ದು, ಇದರಿಂದ ಹೊರಬರಲು ಸುಧಾರಿತ ಕೃಷಿ ಪದ್ಧತಿ ಅನಿವಾರ್ಯವಾಗಿದೆ ಎಂದರು.
ರೈತರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬೇಕು. ಕೃಷಿ ವಿಜ್ಞಾನಿಗಳಿಂದ ಮಾರ್ಗದರ್ಶನ ಹೊಂದಬೇಕು. ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಉತ್ಪಾದನಾ ವೆಚ್ಚವನ್ನು ತಗ್ಗಿಸಿ, ಅಧಿಕ ಇಳುವರಿ ಪಡೆಯುವ ಮೂಲಕ ಕೃಷಿಯಲ್ಲಿ ಲಾಭ ಕಂಡುಕೊಳ್ಳಬೇಕು ಎಂದು ಮಂಥರ್ ಗೌಡ ತಿಳಿಸಿದರು.
ಭುವನ ಮಂದಾರ ರೈತ ಉತ್ಪಾದಕರ ಸಂಘವು ಸದಸ್ಯರಿಗೆ ಹಾಗೂ ರೈತರಿಗೆ ಉತ್ತಮವಾದ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ. ಎಲ್ಲಾ ಸದಸ್ಯರು ಸಂಘದ ಸೌಲಭ್ಯಗಳ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. ಈ ಸಂದರ್ಭ ಭುವನ ಮಂದಾರ ರೈತ ಉತ್ಪಾದಕರ ಸಂಘದ ಎಸ್.ಎಂ. ಡಿಸಿಲ್ವಾ, ಖಾಲಿಸ್ತಾ ಡಿಸಿಲ್ವಾ, ಮಸಗೋಡು ಲೋಕೇಶ್, ಮಂದಣ್ಣ ಸೇರಿದಂತೆ ನಿರ್ದೇಶಕರು ಉಪಸ್ಥಿತರಿದ್ದರು.