ಗೋಣಿಕೊಪ್ಪಲು, ಸೆ. ೧೫ : ಊರೂರು ಸುತ್ತುತ್ತಾ ತನ್ನ ಸಂಬAಧಿಕರ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದ ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಾಗ್ಯ ಗ್ರಾಮದ ನಿವಾಸಿಯಾದ ಎಂ. ಮಲ್ಲೇಶ (೨೪) ಎಂಬಾತನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ದ. ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿಯ ರಾಜಾ ಕಾಲೋನಿಯ ನಿವಾಸಿಯಾದ ಎನ್. ಮಂಜುನಾಥ ಎಂಬವರ ಮನೆಗೆ ಜೂನ್ ೧೭ರಂದು ಆಗಮಿಸಿದ್ದ ಎಂ. ಮಲ್ಲೇಶ ಮಂಜುನಾಥ್ ಮನೆಯಿಂದ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ. ಮನೆಯ ಮಾಲೀಕರು ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಗೋಣಿಕೊಪ್ಪ ಪೊಲೀಸರ ತಂಡ ಕಳ್ಳನ ಜಾಡು ಹುಡುಕುತ್ತಾ ತೆರಳಿ ಅರಸಿಕೆರೆಯಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ತನ್ನ ಸಂಬAಧಿಕರ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಮಲ್ಲೇಶ ಒಂದು ಊರಿನಿಂದ ಮತ್ತೊಂದು ಊರಿನ ಬಂಧುಗಳ ಮನೆಗೆ ತೆರಳಿ ತಂಗುತ್ತಿದ್ದ. ನಂತರ ಮನೆಯಲ್ಲಿರುವ ಬೆಲೆಬಾಳುವ ಆಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ. ಈತ ಇಲ್ಲಿಯವರೆಗೆ ಹಲವಾರು ಕಳ್ಳತನ ಮಾಡಿದ್ದರೂ ಯಾರೂ ಕೂಡ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರಲಿಲ್ಲ. ಇದರಿಂದಾಗಿ ಮಲ್ಲೇಶನಿಗೆÀ ಕಳ್ಳತನ ಮಾಡುವುದು ಚಾಳಿಯಾಗಿತ್ತು.

ಮಾಯಮುಡಿ ಗ್ರಾಮದ ಮಂಜುನಾಥ್ ಅವರ ಮನೆಗೆ ಬಂದ ಸಂದರ್ಭ ಮನೆಯ ಬಾಗಿಲಿನ ಕೀಯನ್ನು ಹಿತ್ತಲಿನಲ್ಲಿರುವ ಹೂ ಕುಂಡದಲ್ಲಿ ಇಟ್ಟು ಕೆಲಸಕ್ಕೆ ತೆರಳುವುದನ್ನು ತಿಳಿದುಕೊಂಡ ಆರೋಪಿ ಬಾಗಿಲಿನ ಕೀಯನ್ನು ಬಳಸಿಕೊಂಡು ಬೀಗ ತೆರೆದು ಮನೆಯ ಕಪಾಟುವಿನಲ್ಲಿ ಇಟ್ಟಿದ್ದ ೧.೩೫ ಲಕ್ಷ ಮೌಲ್ಯದ ೨೮ ಗ್ರಾಂ ಚಿನ್ನಾಭರಣ, ೪ ಸಾವಿರ ಮೌಲ್ಯದ ಬೆಳ್ಳಿ ಚೈನ್‌ನನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಮಲ್ಲೇಶನನ್ನು ವಶಕ್ಕೆ ಪಡೆದ ಗೋಣಿಕೊಪ್ಪ ಪೊಲೀಸರು ೨೮ ಗ್ರಾಂ ಚಿನ್ನಾಭರಣ, ೧ ಬೆಳ್ಳಿ ಚೈನ್ ಸೇರಿ ಒಟ್ಟು ೧,೩೯,೦೦೦ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್ ನಿರ್ದೇಶನದ ಮೇರೆ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ಸಿಪಿಐ ಗೋವಿಂದರಾಜು, ಎಸ್‌ಐ ರೂಪಾದೇವಿ ಬಿರಾದಾರ್, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಎಂ.ಕೆ. ಪೂವಣ್ಣ, ಎಂ. ಚಂದ್ರಶೇಖರ್, ಜಿ.ವಿ. ತೇಜಸ್‌ಕುಮಾರ್, ಪಿ.ಎ. ಮಹಮ್ಮದ್ ಆಲಿ, ಕೆ.ಎ. ಅನೀಫ್ ಹಾಗೂ ಬಿ.ಎನ್. ಪುನೀತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ಹೆಚ್.ಕೆ. ಜಗದೀಶ್