ವೀರಾಜಪೇಟೆ, ಸೆ. ೧೪: ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಆರೋಗ್ಯ ಸೌಲಭ್ಯವನ್ನು ಎಲ್ಲರಿಗೂ ದೊರಕುವಂತೆ ಮಾಡುವ ಉದ್ದೇಶದಿಂದ ರಾಷ್ಟçಪತಿ ದ್ರೌಪದಿ ಮುರ್ಮ ವರ್ಚುವಲ್ ಆಗಿ ಆಯುಷ್ಮಾನ್ ಭವ ಅಭಿಯಾನಕ್ಕೆ ದೇಶಾದಾದ್ಯಂತ ಏಕಕಾಲದಲ್ಲಿ ಚಾಲನೆ ನೀಡಿದರು.

ಈ ಅಭಿಯಾನದ ಪ್ರಯುಕ್ತ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಕಚೇರಿಯಲ್ಲಿ ವರ್ಚುವಲ್ ಚಾಲನೆಯನ್ನು ಪ್ರಬಾರ ಮುಖ್ಯ ವೈದ್ಯಾಧಿಕಾರಿ ಡಾ. ಹೇಮಪ್ರಿಯ, ತಹಶೀಲ್ದಾರ್ ರಾಮಚಂದ್ರ, ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಪುರಸಭೆ ಅಧಿಕಾರಿಗಳು, ಆರೋಗ್ಯ ರಕ್ಷಾ ಸಮಿತಿಯ ಅನಿಲ್, ಸಂತೋಷ್, ಶಿವಕುಮಾರ್ ಅನಿತ, ಮಮತ, ಸೇರಿದಂತೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಈ ವೀಡಿಯೋ ಕಾನ್ಫರೆನ್ಸ್ ವೀಕ್ಷಿಸಿದರು.

ನಂತರ ಮಾತನಾಡಿದ ಪ್ರಬಾರ ಮುಖ್ಯ ವೈದ್ಯಾಧಿಕಾರಿ ಡಾ. ಹೇಮಪ್ರಿಯ, ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಲು ಬಾಕಿ ಇರುವವರು ಮುಂದಿನ ಮೂರು ತಿಂಗಳ ಒಳಗೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಡಿಸೆಂಬರ್‌ನಲ್ಲಿ ಇದರ ಸೌಲಭ್ಯ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದುದರಿಂದ ಎಲ್ಲರು ಈ ಕಾರ್ಡನ್ನು ಮಾಡಿಸಿ ಎಂದು ಮಾಹಿತಿ ನೀಡಿದರು.