ಮಡಿಕೇರಿ, ಸೆ. ೧೪: ಕಾಲೇಜಿಗೆ ತೆರಳಿದ್ದ ಅಪ್ರಾಪ್ತೆ ಬಾಲಕಿಯರಿಬ್ಬರನ್ನು ಯುವಕರಿಬ್ಬರು ಅಪಹರಿಸಲು ಯತ್ನಿಸಿದ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ನೊಂದ ಬಾಲಕಿ ಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಮೂರ್ನಾಡಿನ ಮುಜಾಮಿನ್ ಮತ್ತು ಸಮ್ಮದ್ ಬಂಧಿತ ಆರೋಪಿಗಳು. ಮಡಿಕೇರಿ ತಾಲೂಕಿನ ಗ್ರಾಮವೊಂದರಲ್ಲಿರುವ ಕಾಲೇಜಿಗೆ ಬಾಲಕಿಯರು ತೆರಳಿದ ಸಂದರ್ಭ ಕಾರಿನಲ್ಲಿ ಹೋದ ಯುವಕರು ಅಪ್ರಾಪ್ತೆಯರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಮಗಳು ನಾಪತ್ತೆಯಾದ ಕುರಿತು ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿದ್ದಾರೆ.

(ಮೊದಲ ಪುಟದಿಂದ) ಈ ವಿಚಾರ ಯುವಕರಿಗೆ ತಿಳಿದು ಬಾಲಕಿಯರನ್ನು ಕುಶಾಲನಗರ ದಲ್ಲಿಯೇ ಬಿಟ್ಟು ತೆರಳಿದ್ದಾರೆ. ನಂತರ ಬಾಲಕಿಯರನ್ನು ಮನೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಆನಂತರ ಘಟನೆಯಿಂದ ನೊಂದ ಒಬ್ಬಾಕೆ ಬಟ್ಟೆ ಬದಲಾಯಿಸಲು ತೆರಳುವುದಾಗಿ ಹೇಳಿ ಕೋಣೆಯೊಳಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ.

ಆರೋಪಿಗಳನ್ನು ಮೈಸೂರಿನಲ್ಲಿ ಪತ್ತೆಹಚ್ಚಿ ಮಡಿಕೇರಿಗೆ ಕರೆತರಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣ ಹಾಗೂ ಪೋಕ್ಸೊ ಪ್ರಕರಣ ದಾಖಲಾಗಿದೆ.