ವೀರಾಜಪೇಟೆ, ಸೆ. ೧೩: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಆಂತರಿಕ ಗುಣಮಟ್ಟ ಭರವಸ ಕೋಶ, ಉದ್ಯೋಗ ಕೋಶ ಸಮಿತಿ ಹಾಗೂ ನಾಂದಿ ಫೌಂಡೇಷನ್ ಹೈದ್ರಾಬಾದ್ ಇವರ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿರುವ ಒಂದು ವಾರದ ಮೃದು ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದು, ಭಾರತದಂತಹ ರಾಷ್ಟçದಲ್ಲಿ ಅತ್ಯುನ್ನತ ಸ್ಥಾನಗಳಾದ ರಾಷ್ಟçಪತಿ, ಪ್ರಧಾನಮಂತ್ರಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಹೊಂದುತ್ತಿರುವುದು ಮಹಿಳಾ ಸಬಲೀಕರಣದ ಒಂದು ನಿದರ್ಶನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾ. ೧೧ ರಿಂದ ೧೬ ರವರೆಗೆ ಒಂದು ವಾರ ನಡೆಯುವ ತರಬೇತಿ ಕಾರ್ಯಾಗಾರಕ್ಕೆ ತರಬೇತುದಾರರಾಗಿ ಆಗಮಿಸಿರುವ ಚಂದ್ರಶೇಖರ ಆರೋರ ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡಿ, ಇಂತಹ ಅತ್ಯುತ್ತಮ ತರಬೇತಿಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಆಂತರಿಕ ಗುಣಮಟ್ಟ ಭರವಸ ಕೋಶದ ಸಂಚಾಲಕ ನಾಗರಾಜಮೂರ್ತಿ ಪಿ.ಎನ್. ಹಾಗೂ ಉದ್ಯೋಗ ಕೋಶ ಸಮಿತಿಯ ಸಂಚಾಲಕ ರಘುರಾಜು ಆರ್ ಉಪಸ್ಥಿತರಿದ್ದರು. ೬೫ ವಿದ್ಯಾರ್ಥಿನಿಯರು ಈ ತರಬೇತಿಯ ಉಪಯೋಗವನ್ನು ಪಡೆಯಲಿದ್ದಾರೆ.