ಚೆಯ್ಯಂಡಾಣೆ, ಸೆ. ೧೩: ಕೊಡಗಿನ ಚೆಯ್ಯಂಡಾಣೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೇಲಾವರ ಗ್ರಾಮದ ಕಬ್ಬೆಬೆಟ್ಟ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವತ್ತ ಹೆಸರು ವಾಸಿಯಾಗಿದೆ. ವೀರಾಜಪೇಟೆ ಮುಖಾಂತರ ಕಡಂಗ-ಕರಡ-ಚೆಯ್ಯAಡಾಣೆ ಮಾರ್ಗದಲ್ಲಿ ಮಡಿಕೇರಿ ಮುಖಾಂತರ ಮೂರ್ನಾಡು, ಪಾರಾಣೆ, ಬಾವಲಿ ಮೂಲಕ ಚೆಯ್ಯಂಡಾಣೆ ಹಾಗೂ ನಾಪೋಕ್ಲು, ಕಕ್ಕಬೆ, ಮರಂದೊಡ ಮೂಲಕ ತೆರಳಬಹುದು. ವೀರಾಜಪೇಟೆ, ಮಡಿಕೇರಿ ಮಾರ್ಗವಾಗಿ ಬಂದರೆ ಚೆಯ್ಯಂಡಾಣೆಯಿAದ ಎಡಕ್ಕೆ ಹಾಗೂ ನಾಪೋಕ್ಲು ಮಾರ್ಗವಾಗಿ ಬಂದವರಿಗೆ ಚೆಯ್ಯಂಡಾಣೆಯಿAದ ಬಲಕ್ಕೆ ಚೇಲಾವರ ಜಲಪಾತ ಎಂಬ ನಾಮಫಲಕ ಗೋಚರಿಸುತ್ತವೆ.

ಅಲ್ಲಿಂದ ಕಿರಿದಾದ ರಸ್ತೆಯಲ್ಲಿ ೫ ಕಿ.ಮೀ. ಸಂಚರಿಸಿದರೆ ಎಡಕ್ಕೆ ಚೇಲಾವರ (ಕಬ್ಬೆ) ಜಲಪಾತ ಕಾಣಸಿಗುತ್ತದೆ. ಅಲ್ಲಿಂದ ಮುಂದಕ್ಕೆ ೨.೫ ಕಿ.ಮೀ. ಸಂಚರಿಸಿದರೆ ಕಬ್ಬೆಬೆಟ್ಟದ ಬುಡ ತಲುಪಬಹುದು.

ಮಾರ್ಗ ಮಧ್ಯೆ ಹಲವಾರು ಮನಮೋಹಕವಾದ ಚಿಕ್ಕ ಚಿಕ್ಕ ಜಲಪಾತಗಳು ಗೋಚರಿಸುತ್ತವೆ. ಬೆಟ್ಟಕ್ಕೆ ಹತ್ತುವ ಮೊದಲು ಬೆಟ್ಟಕ್ಕೆ ಹತ್ತುವುದು ಹೇಗೆ, ಅಲ್ಲಿ ಕಸ ಹಾಕಬಾರದು ಹಾಗೂ ಅಲ್ಲಿದ್ದ ಕಸ ಹೆಕ್ಕಿ ಕೈಚೀಲಕ್ಕೆ ಹಾಕಲು ಮನಸ್ಸಿದ್ದರೆ ನಾವು ಕೈ ಚೀಲ ಕೊಡುತ್ತೇವೆ ಎಂಬ ಸಲಹೆ ಸೂಚನೆಗಳನ್ನು ಸ್ಥಳೀಯರು ನೀಡುತ್ತಾರೆ.

ಅಲ್ಲಿಂದ ಕಚ್ಚಾ ರಸ್ತೆಯಲ್ಲಿ ಸುಮಾರು ಅರ್ಧ ಕಿ.ಮೀ.ನಷ್ಟು ಸಾಗಿದಾಗ ಒಂದು ಕೆರೆ ಕಾಣಸಿಗುತ್ತದೆ. ಕೆರೆಯ ಸಮೀಪ ಬಲಭಾಗಕ್ಕೆ ಅರಣ್ಯ ಇಲಾಖೆ ಆಳವಡಿಸಿದ ಗೇಟ್ ಕಾಣಸಿಗುತ್ತದೆ. ಎದುರಿಗೆ ಎರಡು ಬೆಟ್ಟಗಳ ಅನಾವರಣ ಬಲಭಾಗಕ್ಕೆ ತಿರುಗಿದರೆ ಕಬ್ಬೆಬೆಟ್ಟ ಕಾಣಸಿಗುತ್ತದೆ. ಎಡಕ್ಕೆ ತಿರುಗಿದರೆ ಚೋಮಕುಂದ್ ಬೆಟ್ಟ ಕಾಣಸಿಗುತ್ತದೆ.

ಪ್ರವಾಸಿಗರು, ಚಾರಣಪ್ರಿಯರು ಹೆಚ್ಚಾಗಿ ಕಬ್ಬೆಬೆಟ್ಟದತ್ತ ಸಾಗುತ್ತಾರೆ. ರೆಸಾರ್ಟ್ ಹೋಂ ಸ್ಟೇನಲ್ಲಿ ತಂಗಿದವರು ತಂಡೊಪತAಡವಾಗಿ ಚೋಮಕುಂದ್ ಬೆಟ್ಟಕ್ಕೆ ಬರುತ್ತಾರೆ. ಚಾರಣಪ್ರಿಯರು ಕಬ್ಬೆಬೆಟ್ಟ ಹಾಗೂ ಚೋಮಕುಂದ್ ಬೆಟ್ಟವನ್ನು ಮನಸಾರೆ ಆನಂದಿಸಿಕೊಳ್ಳುತ್ತಾರೆ.

ಬೆಟ್ಟ ಹತ್ತುವ ದಾರಿಯ ಮಧ್ಯ ಸ್ವಚ್ಛತೆಯ ನಾಮಫಲಕ ಇದೆಯಾದರೂ ಜನ ಆದನ್ನು ಲೆಕ್ಕಿಸದೆ ಪ್ಲಾಸ್ಟಿಕ್ ಬಾಟಲ್‌ಗಳನ್ನು, ತಿಂಡಿ ತಿನಿಸುಗಳ ಪೊಟ್ಟಣಗಳನ್ನು ಅಲ್ಲೇ ಹಾಕಿ ತೆರಳುತ್ತಾರೆ. ರಾತ್ರಿ ವೇಳೆ ಕೆಲವರು ಆಗಮಿಸಿ ಕುಡಿದು ಪುಂಡಾಟ, ಪಾರ್ಟಿ ಮಾಡಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ.

ರಾತ್ರಿ ವೇಳೆ ಪ್ರವಾಸಿಗರಿಗೆ ಕಡಿವಾಣ ಹಾಕಿ

ಕಬ್ಬೆಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಇಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ೫ ಗಂಟೆಯ ನಂತರ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕು.

ಇಲ್ಲಿಗೆ ಗಾರ್ಡ್ಗಳನ್ನು ನೇಮಿಸಬೇಕು. ಅಶುಚಿತ್ವಗೊಳಿಸುವವರಿಗೆ ದಂಡ ವಿಧಿಸಬೇಕು. ವಾರದ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಪೊಲೀಸರು ನಿಗಾ ವಹಿಸಬೇಕು. ಬೆಟ್ಟಕ್ಕೆ ಪ್ರವೇಶ ಪಡೆಯುವ ಸಂದರ್ಭ ಗೇಟ್ ನಿರ್ಮಿಸಿ ವಾಹನ ತಪಾಸಣೆ ನಡೆಸಬೇಕು ಹಾಗೂ ಶುಲ್ಕ ವಸೂಲಿ ಮಾಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.

ಕೇರಳಕ್ಕೆ ಸಂಪರ್ಕ ರಸ್ತೆ (ಕಾಲು ದಾರಿ)

ಈ ಬೆಟ್ಟದ ಮೂಲಕ ವರ್ಷಂಪ್ರತಿ ಕೇರಳದ ಪಯ್ಯವೂರ್‌ನಲ್ಲಿ ನಡೆಯಲಿರುವ ಊಟ್ ಉತ್ಸವಕ್ಕೆ ಎತ್ತು ಪೋರಾಟದೊಂದಿಗೆ ಕಾಲ್ನಡಿಗೆಯಲ್ಲಿ ತೆರಳುವ ಮಾರ್ಗ ಕೂಡ ಗೋಚರವಾಗುತ್ತದೆ.

ಬೆಟ್ಟದಲ್ಲಿ ಪಯ್ಯವೂರ್ ಗೆ ತೆರಳುವ ಭಕ್ತಾದಿಗಳು ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸ್ಥಳ ಕೂಡ ನೋಡುಗರಿಗೆ ಕಾಣಸಿಗುತ್ತದೆ. ಬೆಟ್ಟದ ತುದಿಯಲ್ಲಿ ಮನಮೋಹಕ ದೃಶ್ಯ ನೋಡಲು ಹಾಗೂ ಕೇರಳದ ಪಟ್ಟಣವನ್ನು ದೂರದಿಂದ ವೀಕ್ಷಿಸಲು ತಯಾರು ಮಾಡಿದ ಒಂದು ಕಟ್ಟಡ ಕೂಡ ಇಲ್ಲಿ ನೆಲೆ ನಿಂತಿದೆ.

ಚೇಲಾವರ ಜಲಪಾತ

ಕೊಡಗಿನ ಅತ್ಯಂತ ರಮಣೀಯವಾದ ಜಲಪಾತಗಳಲ್ಲಿ ಚೇಲಾವರ ಜಲಪಾತವು ಒಂದಾಗಿದೆ. ಈ ಜಲಪಾತವು ಸುಮಾರು ೧೫೦ ಆಡಿ ಎತ್ತರದಿಂದ ಧುಮುಕುತ್ತಿದೆ. ಚೋಮಕುಂದ್, ಕಬ್ಬೆಬೆಟ್ಟ ಹಾಗೂ ದೊಡ್ಡಬೆಟ್ಟದ ಮೂಲಕ ಹರಿದು ಬರುವ ನೀರು ಚೇಲಾವರ (ಕಬ್ಬೆ) ಜಲಪಾತವಾಗಿ ಧುಮುಕ್ಕಿ ಹೆಸರು ವಾಸಿಯಾಗಿದೆ. ವಾಸ್ತವವಾಗಿ ಜಲಪಾತದ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡಬೇಕು. ಮಳೆಗಾಲದಲ್ಲಿ ಘರ್ಜಿಸುತ್ತ ಧರೆಗೆ ಧುಮುಕುತ್ತದೆ ಈ ಜಲಪಾತ. ಈ ಜಲಪಾತದ ಮತ್ತೊಂದು ಆಕರ್ಷಣೆ ಅಲ್ಲಲ್ಲಿ ಆಮೆಯ ಆಕಾರದ ಬಂಡೆ. ಅದರಿಂದ ಈ ಜಲಪಾತಕ್ಕೆ ಆಮೆ ಪಾರೆ ಎಂದು ಕೂಡ ಹೆಸರಿದೆ.

ಪ್ರವಾಸಿಗರು ಹೆಚ್ಚಾಗಿ ಬರುವ ಈ ಜಲಪಾತಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಜಲಪಾತಕ್ಕೆ ತೆರಳುವ ಕಚ್ಚಾ ರಸ್ತೆ ಅದೋಗತಿಯಲ್ಲಿದೆ. ಎರಡು ಬದಿಗಳಿಂದ ನಡೆದಾಡಲು ತೊಂದರೆ ಇದೆ. ಈ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸುವ ಅಗತ್ಯವಿದೆ. ನೀರಿಗೆ ಇಳಿಯದ ಹಾಗೆ ಸೂಕ್ತ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ಬೃಹತ್ ಸೂಚನಾ ನಾಮಫಲಕ ಅಳವಡಿಸಬೇಕು. ಗಸ್ತು ಪೊಲೀಸರನ್ನು ನೇಮಿಸಬೇಕು. ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಹಾಗೂ ಮಾಹಿತಿ ನೀಡಬೇಕು. ಇಲ್ಲಿ ೨೧ಕ್ಕೂ ಅಧಿಕ ಜನರು ಮೃತಪಟ್ಟ ದಾಖಲೆ ಇದೆ.

ಈ ಜಲಪಾತದಲ್ಲಿ ನೀರಿಗೆ ಇಳಿದು ಮೋಜು ಮಸ್ತಿ ಮಾಡಿದರೆ ನೀರಿನ ಸೆಳೆತಕ್ಕೆ ಸಿಲುಕಿ ಬದುಕಿದವರು ಬಲು ಕಡಿಮೆ. ಆದ್ದರಿಂದ ಜಲಪಾತದ ಸೌಂದರ್ಯ ಸವಿದು ಹಿಂದಿರುಗಿದರೆ ಉತ್ತಮ. ಈ ಜಲಪಾತಕ್ಕೆ ಬೆಳಿಗ್ಗೆ ೬ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿದರೆ ಸಾಕು ಎಂಬುದು ಸ್ಥಳೀಯರ ಅಭಿಪ್ರಾಯ.

- ಅಶ್ರಫ್ ಚೆಯ್ಯಂಡಾಣೆ, ಮೊ. ೯೬೧೧೫೨೧೩೫೩