ಮಡಿಕೇರಿ, ಸೆ. ೧೩: ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮುಳಿಯ ಜ್ಯುವೆಲ್ಲರಿ ಮಡಿಕೇರಿ ವತಿಯಿಂದ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಜನರಲ್ ತಿಮ್ಮಯ್ಯ ಶಾಲೆಯ ಶಿಕ್ಷಕಿ ಪ್ರತಿಮಾ ಅಚ್ಯುತ ಭಟ್ ಮತ್ತು ಕಡಗದಾಳು ಶಾಲಾ ಶಿಕ್ಷಕಿ ಪ್ರತಿಮಾ ಶೆಟ್ಟಿ ನಡೆಸಿಕೊಟ್ಟರು. ನಂತರ ಮಾತನಾಡಿದ ಪ್ರತಿಮಾ ಶೆಟ್ಟಿ ಕಾರ್ಯಕ್ರಮಕ್ಕೆ ಮಕ್ಕಳನ್ನು ಅಣಿಗೊಳಿಸಿದ ಪೋಷಕರ ಶ್ರಮ ಹಾಗೂ ಸಂಘಟಕರ ಪಾತ್ರ ಶ್ಲಾಘನೀಯವೆಂದರು.

ಪ್ರಶಸ್ತಿ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿ ಪಾಡೆಯಂಡ ವಸಂತಿ ಮಾತನಾಡಿ, ಮಕ್ಕಳಲ್ಲಿರುವ ಕಲೆಯನ್ನು ಹೊರತರಲು ಮತ್ತು ಮಕ್ಕಳ ಬಗ್ಗೆ ಪೋಷಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಕೊಡಗಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮುಳಿಯ ಸಂಸ್ಥೆಯ ಪ್ರಯತ್ನ ಉತ್ತಮವಾದದ್ದು ಎಂದರು. ಮುದ್ದುಕೃಷ್ಣ, ಬಾಲಕೃಷ್ಣ, ಮತ್ತು ರಾಧಾಕೃಷ್ಣ ಈ ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು ೬೫ ಮಕ್ಕಳು ಪಾಲ್ಗೊಂಡಿದ್ದರು. ಸಂಸ್ಥೆಯ ವ್ಯವಸ್ಥಾಪಕ ಸೋಮಣ್ಣ ತೀತಿಮಾಡ ಸ್ವಾಗತಿಸಿ ವಂದಿಸಿದರು. ಬಾಳೆಯಡ ದಿವ್ಯಾ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಹ ವ್ಯವಸ್ಥಾಪಕ ಚಂದ್ರಶೇಖರ್ ಸಿಬ್ಬಂದಿಗಳು ಹಾಗೂ ಪೋಷಕರು ಹಾಜರಿದ್ದರು. ಮೂರೂ ವಿಭಾಗಗಳಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದವರಿಗೆ ಸ್ಮರಣಿಕೆ, ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಯಿತು.