ಗೋಣಿಕೊಪ್ಪಲು, ಸೆ. ೧೨: ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಪಂಚಾಯಿತಿಯ ಪಹಣಿ ಪತ್ರ ಇದೀಗ ಲಭ್ಯವಾಗಿದ್ದು, ಕಿರುಗೂರು ಗ್ರಾಮ ಪಂಚಾಯಿತಿಯ ಸ್ಥಳಕ್ಕೆ ತನ್ನದೇ ಆದ ಪಹಣಿ ಲಭಿಸಿದೆ. ಕಳೆದ ೨ ವರ್ಷಗಳಿಂದ ಪಂಚಾಯಿತಿಯ ಹೆಸರಿಗೆ ಪಹಣಿ ಪತ್ರ ಪಡೆಯಲು ಇಲ್ಲಿನ ಆಡಳಿತ ಮಂಡಳಿ ಸತತ ಪ್ರಯತ್ನ ನಡೆಸಿತ್ತು. ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗೆ ನೀಡಲಾಗಿತ್ತು. ಆದರೂ ನಾನಾ ಕಾರಣಗಳಿಂದ ಪಹಣಿ ಪತ್ರವು ಗ್ರಾಮ ಪಂಚಾಯಿತಿಗೆ ಲಭಿಸಿರಲಿಲ್ಲ.

ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ಅವರು ಗ್ರಾಮ ಪಂಚಾಯಿತಿಗೆ ಅವಶ್ಯವಿರುವ ಪಹಣಿ ಪತ್ರವನ್ನು ದಾಖಲೆಯಾಗಿ ಪಡೆಯಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ಮಂಡಳಿಯು ಸಂಬAಧಿಸಿದ ಅಧಿಕಾರಿಗಳಿಗೆ ಒತ್ತಡ ಹೇರಿತ್ತು.

ಹಲವು ಸಮಯದಿಂದ ಗ್ರಾಮ ಪಂಚಾಯಿತಿಯ ಪಹಣಿ ಪತ್ರ ದೊರೆಯದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಡತವನ್ನು ಆದ್ಯತೆಯಾಗಿ ಪರಿಗಣಿಸಿ, ಉಪವಿಭಾಗಾಧಿಕಾರಿಗಳಾದ ಯತೀಶ್ ಉಲ್ಲಾಳ್ ಅವರಿಗೆ ಕಡತವನ್ನು ರವಾನಿಸಿದ್ದರು. ಕಡತ ಪರಿಶೀಲನೆಯ ನಂತರ ಹಿರಿಯ ಅಧಿಕಾರಿಗಳು ಕಿರುಗೂರು ಗ್ರಾಮ ಪಂಚಾಯಿತಿಗೆ ಸೇರಿದ ಪಹಣಿ ಪತ್ರವನ್ನು ಮಂಜೂರು ಮಾಡಿದ್ದಾರೆ.

ಇತ್ತೀಚೆಗೆ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಅವರು ಪಂಚಾಯಿತಿ ಅಧ್ಯಕ್ಷ ಚೆಪ್ಪುಡಿರ ರಾಕೇಶ್ ಅವರಿಗೆ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿಗೆ ಮಂಜೂರಾದ ಪಹಣಿ ಪತ್ರವನ್ನು ವಿತರಿಸಿದರು.