*ಗೋಣಿಕೊಪ್ಪ, ಸೆ. ೧೨: ಜೆಸಿಐ ಪೊನ್ನಂಪೇಟೆ ನಿಸರ್ಗ ಆಯೋಜನೆ ಯಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಗ್ರಾ.ಪಂ. ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು ಚಾಲನೆ ನೀಡಿದರು.

ಶ್ರೀ ಉಮಾಮಹೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜೆಸಿಐ ಸಪ್ತಾಹ ೨೦೨೩ರ ಪ್ರಯುಕ್ತ ರಕ್ತದಾನ ಶಿಬಿರ ಜೆಸಿಐ ಪೊನ್ನಂಪೇಟೆ ನಿಸರ್ಗ ಅಧ್ಯಕ್ಷ ನೀತ್ ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಮತ್ತೊಬ್ಬರ ಜೀವವನ್ನು ಉಳಿಸಲು ಕಾರಣವಾಗಬಹುದು. ಯುವ ಸಮುದಾಯ ರಕ್ತದಾನ ಮಾಡುವುದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅಧ್ಯಕ್ಷ ಸೌಮ್ಯ ಬಾಲು ಸಲಹೆ ನೀಡಿದರು.

ಗ್ರಾ.ಪಂ. ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ರಕ್ತದಾನ ಮಾಡುವುದರ ಶ್ರೇಷ್ಠತೆಯನ್ನು ಯುವ ಸಮುದಾಯ ಅರಿತುಕೊಳ್ಳುವುದರಲ್ಲಿ ಸೋತಿದೆ. ದುಶ್ಚಟಗಳಿಗೆ ಒಳಗಾಗುತ್ತಿರುವ ಯುವಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ. ಮಕ್ಕಳಲ್ಲಿ ರಕ್ತದಾನದ ಶ್ರೇಷ್ಠತೆಯ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.

ಜೆಸಿಐ ಯೋಜನಾಧಿಕಾರಿ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ರಕ್ತದಾನದಿಂದ ರೋಗನಿರೋಧಕ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲು ಸಾಧ್ಯ ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಎ.ಪಿ. ದಿನೇಶ್ ಮಾತನಾಡಿ, ನಿಸರ್ಗ ಜೆ.ಸಿಐ ೧೩ ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ ಜೆಸಿವಾರ ಸಪ್ತಾಹದಡಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಕಳೆದ ಬಾರಿ ೪೪ ಯೂನಿಟ್ ರಕ್ತ ಸಂಗ್ರಹಿಸಲಾಗಿತ್ತು ಎಂದು ತಿಳಿಸಿದರು. ಮಡಿಕೇರಿ ರಕ್ತನಿಧಿ ಘಟಕದ ವೈದ್ಯ ಗೌತಮ್, ಜೆಸಿಐ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಉಪಸ್ಥಿತಿಯಲ್ಲಿ ಜೆಸಿ ವಾಣಿಯನ್ನು ಸತೀಶ್ ಸಿಂಗಿ, ಸ್ವಾಗತವನ್ನು ಸುರೇಶ್ ನಿರ್ವಹಿಸಿ ದರು. ಬಿ.ಯು. ಕಿರಣ್, ಸ್ವಾಮಿ, ಅಕ್ಷಯ್, ತನು, ಚಂಗಪ್ಪ ಸೇರಿದಂತೆ ಜೆಸಿಐ ಪದಾಧಿಕಾರಿಗಳು, ಸದಸ್ಯರು ಗಳು ಭಾಗವಹಿಸಿದರು.