ಸೋಮವಾರಪೇಟೆ, ಸೆ. ೧೧: ನಿಡ್ತ ಮೀಸಲು ಅರಣ್ಯಕ್ಕೆ ಒಳಪಡುವ ಬಾಣಾವರ ವಲಯ ವ್ಯಾಪ್ತಿಯ ಕೆರೆಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸ್ಥಳೀಯರು ಮೀನುಗಾರಿಕೆಗೆ ತಡೆಯೊಡ್ಡಿದ ಘಟನೆ ನಡೆದಿದೆ.

ಬಾಣಾವರ ಅರಣ್ಯ ವ್ಯಾಪ್ತಿಯಲ್ಲಿರುವ, ಸೋಮವಾರಪೇಟೆ-ಬಾಣಾವರ ಮುಖ್ಯರಸ್ತೆ ಬದಿಯಲ್ಲಿರುವ ಕೆರೆಯಲ್ಲಿ ಅಕ್ರಮವಾಗಿ ಬಲೆ ಹಾಕಿ ಮೀನುಗಳನ್ನು ಹಿಡಿಯಲಾಗುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು, ಅಕ್ರಮ ಮೀನುಗಾರಿಕೆಗೆ ತಡೆಯೊಡ್ಡಿದರು.

ನಾವುಗಳು ಕೆರೆಯ ಬಳಿಯಲ್ಲಿ ಸುಳಿದಾಡಿದರೆ, ಗಾಳ ಬಳಸಿ ಮೀನು ಹಿಡಿಯಲು ಮುಂದಾದರೆ ಅರಣ್ಯ ಇಲಾಖೆಯವರು ಆಗಮಿಸಿ ಬೆದರಿಸುತ್ತಾರೆ. ಆದರೆ ತೆಪ್ಪ ಬಳಸಿ, ಬಲೆ ಹಾಕಿ ರಾಜಾರೋಷವಾಗಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದರೆ ಅರಣ್ಯ ಇಲಾಖೆಯವರೇ ಬೆಂಗಾವಲಾಗಿರುತ್ತಾರೆ. ಮೀಸಲು ಅರಣ್ಯದಲ್ಲಿ ನಡೆಯುವ ಅಕ್ರಮಕ್ಕೆ ಈವರೆಗೆ ತಡೆ ಹಾಕಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮೀಸಲು ಅರಣ್ಯದ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಅವಕಾಶ ನೀಡಿದವರು ಯಾರೆಂದು ಗೊತ್ತಿಲ್ಲ. ಸ್ಥಳೀಯ ಅರಣ್ಯ ಇಲಾಖೆಯವರಲ್ಲಿ ವಿಚಾರಿಸಿದರೆ ಅನುಮತಿ ಪಡೆದಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಮೀಸಲು ಅರಣ್ಯದ ಕೆರೆಯಲ್ಲಿ ಮೀನುಗಾರಿಕೆ ಮಾಡುವುದು ಅಕ್ರಮ ಎಂದು ತಿಳಿದಿದ್ದರೂ ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಆರ್‌ಎಫ್‌ಓ ಚೇತನ್ ಅವರು ಪ್ರತಿಕ್ರಿಯೆ ನೀಡಿದ್ದು, ಬಾಣಾವರ ಮೀಸಲು ಅರಣ್ಯಕ್ಕೆ ಒಳಪಟ್ಟಿರುವ ಕೆರೆಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿಂದೆ ಲ್ಯಾಂಪ್ಸ್ ಸೊಸೈಟಿಯವರು ಸ್ಥಳೀಯ ಜೇನುಕುರುಬ ವ್ಯಕ್ತಿಯೋರ್ವರಿಗೆ ಮೀನುಗಾರಿಕೆ ಮಾಡಲು ಟೆಂಡರ್ ನೀಡಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಮೀಸಲು ಅರಣ್ಯದ ಕೆರೆಯಲ್ಲಿ ಮೀನುಗಾರಿಕೆಗೆ ಅರಣ್ಯ ಇಲಾಖೆಯ ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಲ್ಯಾಂಪ್ಸ್ ಸೊಸೈಟಿಯವರಿಗೆ ಟೆಂಡರ್ ಅಕ್ರಮವಾಗಿರುವ ಬಗ್ಗೆ ತಿಳಿಯಪಡಿಸಲಾಗಿದೆ. ಟೆಂಡರ್ ರದ್ದುಪಡಿಸಿ ಮುಂಗಡ ಹಣವನ್ನು ವಾಪಸ್ ನೀಡುವಂತೆ ಸಲಹೆ ನೀಡಲಾಗಿತ್ತು. ಇದೀಗ ಮತ್ತೆ ಮೀನು ಹಿಡಿಯಲು ಅನುಮತಿ ನೀಡುವಂತೆ ಲ್ಯಾಂಪ್ಸ್ನಿAದ ಮನವಿ ಬಂದಿತ್ತು. ಇದಕ್ಕೆ ಅರಣ್ಯ ಇಲಾಖೆ ಯಾವುದೇ ಅನುಮತಿ ನೀಡಿಲ್ಲ. ಇಲ್ಲಿ ಅರಣ್ಯ ಇಲಾಖೆಗೆ ಸೇರಿದ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಲ್ಯಾಂಪ್ಸ್ ಸೊಸೈಟಿ ಟೆಂಡರ್ ನೀಡಿರುವುದು ಮೇಲ್ನೋಟಕ್ಕೆ ಕಂಡುಬAದಿದ್ದು, ಇದು ಅಕ್ರಮವಾಗಿರುವ ಬಗ್ಗೆ ಈಗಾಗಲೇ ಡಿಎಫ್‌ಓ ಅವರ ಗಮನಕ್ಕೆ ತರಲಾಗಿದೆ ಎಂದು ಚೇತನ್ ಅವರು ತಿಳಿಸಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಕೆರೆಯಲ್ಲಿ ಮೀನುಗಾರಿಕೆ ಮಾಡಿರುವವರ ವಿರುದ್ಧ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರ್.ಎಫ್.ಓ. ಚೇತನ್ ಮಾಹಿತಿ ನೀಡಿದ್ದಾರೆ.