ಗೋಣಿಕೊಪ್ಪಲು, ಸೆ. ೧೧: ಕಾಫಿ ತೋಟದ ಲೈನ್‌ಮನೆಗಳಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸವಿರುವ ನಿವೇಶನ ಹಾಗೂ ವಸತಿ ರಹಿತ ಬುಡಕಟ್ಟು ಕುಟುಂಬದವರಿಗೆ ನಿವೇಶನ ಹಾಗೂ ಹಕ್ಕುಪತ್ರ ಒದಗಿಸುವಂತೆ ಒತ್ತಾಯಿಸಿ ಬುಡಕಟ್ಟು ಕಾರ್ಮಿಕರ ಸಂಘ ಆಗ್ರಹಿಸಿ ಪೊನ್ನಂಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟಿಸಿತು. ಈ ಹಿಂದೆ ೮ ತಿಂಗಳುಗಳ ಕಾಲ ನಿರಂತರವಾಗಿ ತಾಲೂಕು ಕಚೇರಿಯ ಮುಂದೆ ಅಹೋರಾತ್ರಿ ಪ್ರತಿಭಟನೆ ಕೈಗೆತ್ತಿಕೊಳ್ಳ ಲಾಗಿತ್ತು. ಈ ವೇಳೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿವೇಶನ ಮಂಜೂರು ಮಾಡುವುದಾಗಿ ಭರವಸೆ ನೀಡಿ ಇಂದಿಗೆ ೫ ತಿಂಗಳು ಕಳೆದರೂ ನಮ್ಮ ಸಮಸ್ಯೆಗೆ ಪರಿಹಾರ ಲಭಿಸಿಲ್ಲ. ಒಂದು ತಿಂಗಳೊಳಗೆ ನಿವೇಶನ ರಹಿತ ಆದಿವಾಸಿಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ನೀಡುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದರು.

ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ. ಗಪ್ಪು ಮುಂದಾಳತ್ವದಲ್ಲಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿಯ ಮುಂದೆ ಜಮಾವಣೆಗೊಂಡ ನೂರಾರು ಗಿರಿಜನರು, ತಾಲೂಕು ತಹಶೀಲ್ದಾರ್‌ಗಳಿಗೆ ಮನವಿ ಸಲ್ಲಿಸಿ ನಂತರ ಪೊನ್ನಂಪೇಟೆಯ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿದರು. ಮೆರವಣಿಗೆಯು ಬಸ್ ನಿಲ್ದಾಣ ಮಾರ್ಗವಾಗಿ ತಾಲೂಕು ಪಂಚಾಯಿತಿಯ ಕಚೇರಿಗೆ ಆಗಮಿಸಿ ಅಲ್ಲಿನ ಕಾರ್ಯನಿರ್ವಾಹಣಾಧಿಕಾರಿ ಗಳಿಗೆ ಹಾಗೂ ಗಿರಿಜನ ಕಲ್ಯಾಣಾಭಿ ವೃದ್ದಿಯ ಅಧಿಕಾರಿಗಳಿಗೆ ತಮ್ಮ ಬೇಡಿ ಕೆಯ ಮನವಿ ಪತ್ರವನ್ನು ಸಲ್ಲಿಸಿ ಕ್ರಮಕ್ಕೆ ಒಂದು ತಿಂಗಳ ಗಡುವು ನೀಡಿದರು.

ತಾಲೂಕು ಕಚೇರಿಯ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬುಡಕಟ್ಟು ಕಾರ್ಮಿಕರ ಸಂಘದ ಅಧ್ಯಕ್ಷ ವೈ.ಬಿ.ಗಪ್ಪು ಲೈನ್ ಮನೆಯಲ್ಲಿರುವ ಗಿರಿಜನರು ಹಲವು ದಶಕಗಳಿಂದ ಮನೆಗಳಿಲ್ಲದೆ, ನಿವೇಶನವಿಲ್ಲದೆ ಕಷ್ಟದಲ್ಲಿದ್ದಾರೆ. ೧೫೦೦ಕ್ಕೂ ಅಧಿಕ ಗಿರಿಜನ ಕುಟುಂಬಗಳು ನಿವೇಶನಕ್ಕಾಗಿ ಸಂಬAಧಿಸಿದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹಲವು ಮನವಿ ಸಲ್ಲಿಸಿದ್ದರೂ ಗಿರಿಜನರಿಗೆ ನಿವೇಶನ ದೊರೆತ್ತಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಈ ಹಿಂದೆ ಮಾಯಮುಡಿ ಗ್ರಾಮ ಪಂಚಾಯಿತಿಯ ಮುಂದೆ ಹಾಗೂ ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಮುಂದೆ ವಸತಿ ರಹಿತರು ಅಹೋರಾತ್ರಿ ಧರಣಿ ನಡಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ನಿರಂತರ ೮ ತಿಂಗಳ ಕಾಲ ನಿವೇಶನ ರಹಿತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಬಿರುನಾಣಿಯಲ್ಲಿ ೭ ಎಕರೆ, ತೆರಾಲುವಿನಲ್ಲಿ ೨೦ ಎಕರೆ ಹಾಗೂ ಮಾಯಮುಡಿ ವ್ಯಾಪ್ತಿಯಲ್ಲಿ ೪ ಎಕರೆ ಜಾಗವನ್ನು ಗಿರಿಜನರಿಗೆ ಮೀಸಲಿಟ್ಟು ತಾಲೂಕು ತಹಶೀಲ್ದಾರ್ ಐಟಿಡಿಪಿ ಇಲಾಖೆಗೆ ಭೂಮಿಯನ್ನು ವರ್ಗಾಯಿಸಿದ್ದಾರೆ. ಆದರೆ ಇರುವ ಭೂಮಿಯನ್ನು ಇನ್ನೂ ಕೂಡ ನಿವೇಶವನ್ನಾಗಿ ಪರಿವರ್ತನೆ ಮಾಡಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಗಡುವು ನೀಡಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಕೂಡಲೇ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡು ನಿವೇಶನ ರಹಿತ ಗಿರಿಜನರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹೋರಾಟಗಾರ್ತಿ ಜ್ಯೋತಿ ಮಾತನಾಡಿ, ಹಾತೂರು ಗ್ರಾಮ ಪಂಚಾಯಿತಿಯ ಕುಂದ ಬಳಿ ಇರುವ ಬಸವೇಶ್ವರ ಬಡಾವಣೆಯಲ್ಲಿ ನೀಡಲಾಗಿದ್ದ ನಿವೇಶನಗಳು ಈ ಬಾರಿಯ ಮಳೆಯಿಂದಾಗಿ ಹೊಳೆ ಬದಿಯ ನಿವೇಶನಗಳು ಕೊಚ್ಚಿ ಹೋಗಿವೆ. ಇದರ ಬದಲಾಗಿ ಬೇರೆಡೆ ನಿವೇಶನ ನೀಡಬೇಕು. ಹೀಗಾಗಲೆ ಇಲ್ಲಿರುವ ನಿವೇಶನದಾರರಿಗೆ ಮನೆ ನಿರ್ಮಿಸಿಕೊಳ್ಳಲು ಐಟಿಡಿಪಿ ಇಲಾಖೆಯಿಂದ ರೂ. ೩.೫ ಲಕ್ಷ ಅನುದಾನವು ಮಂಜೂರಾಗಿದೆ. ಹೀಗಾಗಿ ಕೂಡಲೆ ಈ ಭಾಗದಲ್ಲಿ ಖಾಲಿ ನಿವೇಶನಗಳನ್ನು ಹಾಲಿ ವಾಸವಾಗಿರುವ ಗಿರಿಜನÀರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ತಾಲೂಕು ಪಂಚಾಯಿತಿ ಕಚೇರಿಯ ವ್ಯವಸ್ಥಾಪಕಿ ಸ್ವರೂಪ, ನರೇಗಾ ಸಹಾಯಕ ನಿರ್ದೇಶಕ ಪಿ.ವಿ. ಶ್ರೀನಿವಾಸ್ ವಸತಿ ಯೋಜನೆಯ ನೋಡಲ್ ಅಧಿಕಾರಿ ಅಸ್ಲಾಮ್ ಪಾಷ, ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಬುಡಕಟ್ಟು ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಪಿ.ಸಿ. ಬೋಜ, ಪಿ.ಟಿ. ಜ್ಯೋತಿ, ಜೆ.ಸಿ. ಲಲಿತ, ಜೆ.ಎಸ್. ಚಿನ್ನಮ್ಮ, ಕೊಟ್ಟ, ಗಂಗೆ, ಸೇರಿದಂತೆ ಪ್ರಮುಖರು ಹಾಜರಿ ದ್ದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್, ಪೊನ್ನಂಪೇಟೆ ಠಾಣಾಧಿಕಾರಿ ಜಿ. ನವೀನ್ ಹಾಗೂ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.