ಕುಶಾಲನಗರ, ಸೆ. ೧೨ : ಕಳೆದ ಕೆಲವು ದಿನ ಗಳಿಂದ ಕುಶಾಲನಗರ ಹಾಗೂ ಸಮೀಪದ ಗ್ರಾಮಗಳಿಂದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಜ್ವರ ಪೀಡಿತರಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿರುವುದು ಕಂಡುಬAದಿದ್ದು, ಡೆಂಗ್ಯು ರೋಗದ ಶಂಕೆ ವ್ಯಕ್ತಗೊಂಡಿದೆ.
ನೂರಕ್ಕೂ ಅಧಿಕ ಮಂದಿ ಕೆಮ್ಮು, ನೆಗಡಿ, ಜ್ವರ ಬಾಧೆಗೆ ಒಳಗಾಗಿ ಆಸ್ಪತ್ರೆಯತ್ತ ಬರುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಕುಶಾಲನಗರ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಒಳರೋಗಿ ಗಳಾಗಿ ಚಿಕಿತ್ಸೆ ಪಡೆಯುತ್ತಿರುವುದು ಕಂಡುಬAದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಶಾಲನಗರ ಸರಕಾರಿ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್ ಬಹಳಷ್ಟು ಮಂದಿ ಜ್ವರ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬೆರಳೆಣಿಕೆಯಷ್ಟು ರೋಗಿಗಳಲ್ಲಿ ಡೆಂಗ್ಯೂ ಬಾಧೆ ಕಂಡು ಬಂದಿದೆ. ಬಹುತೇಕರು ಗುಣಮುಖರಾಗಿ ಮನೆಗೆ ಹಿಂತಿರುಗಿರುವುದಾಗಿ ಮಾಹಿತಿ ನೀಡಿದ್ದಾರೆ. ಕುಶಾಲನಗರ ಕೊಪ್ಪ ಬೈಲುಕೊಪ್ಪ ಮುಳ್ಳುಸೋಗೆ ಮುಂತಾದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜ್ವರ ಪೀಡಿತರಾಗಿ ಆಸ್ಪತ್ರೆಗಳತ್ತ ಬರುತ್ತಿದ್ದಾರೆ.
ಸರ್ಕಾರಿ ವೈದ್ಯರೊಬ್ಬರು ಕೂಡ ಜ್ವರ ಪೀಡಿತರಾಗಿ ಆಸ್ಪತ್ರೆ ಸೇರಿರುವ ಪ್ರಕರಣ ವರದಿಯಾಗಿದೆ.
ಮನೆ ಒಳಭಾಗ ಮತ್ತು ಹೊರಭಾಗದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ವೈದ್ಯಾಧಿಕಾರಿ ಡಾ. ಮಧುಸೂಧನ್ ನಾಗರಿಕರಿಗೆ ಸಲಹೆ ನೀಡಿದ್ದಾರೆ. ಮನೆಯ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ‘ಶಕ್ತಿ’ ಮೂಲಕ ಕೋರಿದ್ದಾರೆ. - ಚಂದ್ರಮೋಹನ್