ಪೊನ್ನಂಪೇಟೆ, ಸೆ. ೧೨ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕೃಷಿಯೇತರ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಅರುವತ್ತೊಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಜಾನ ಕೇಂದ್ರದ ಅಣಬೆ ಬೇಸಾಯದ ವಿಷಯ ತಜ್ಞರಾದ ರಷ್ಮಿ ಭಾನು ಪ್ರಕಾಶ್ ಅವರು ಭಾಗವಹಿಸಿ, ಮನೆಯಂಗಳದಲ್ಲಿ ಬೆಳೆಯಬಹುದಾದ ತರಕಾರಿ ಕೃಷಿಗಳು, ಅಲಂಕಾರಿಕ ಬಣ್ಣದ ಮೀನು ಕೃಷಿ, ನಾಟಿ ಕೋಳಿ ಸಾಕಣಿಕೆ, ಅಣಬೆ ಬೇಸಾಯ ಮಾಡುವ ವಿಧಾನ, ಅಣಬೆಯಿಂದ ಉಪ್ಪಿನಕಾಯಿ ತಯಾರಿಸುವ ವಿಧಾನ ಮತ್ತು ಮಾರುಕಟ್ಟೆ ಮಾಡುವ ವಿಧಾನದ ಬಗ್ಗೆ ತರಬೇತಿಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು.

ಈ ಸಂದರ್ಭ ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊನ್ನಂಪೇಟೆ ವಲಯ ಮೇಲ್ವಿಚಾರಕ ನರಸಿಂಹ ಮೂರ್ತಿ, ಸೇವಾಪ್ರತಿನಿಧಿಗಳಾದ ರೋಹಿಣಿ, ಗೌರಿ, ಮೋಸಿನ, ಶಾಲಿನಿ, ಚೋಂದು, ಭವಾನಿ, ಒಕ್ಕೂಟ ಪದಾಧಿಕಾರಿಗಳಾದ ರೇವತಿ, ಶಾರದ ಇನ್ನಿತರರು ಉಪಸ್ಥಿತರಿದ್ದರು.