ಮಡಿಕೇರಿ, ಸೆ. ೧೧ : ಗ್ರಾಹಕರೋರ್ವರ ಎರಡು ವಾಹನಗಳಿಗೆ ವಿಮೆ ಹಣ ಪಡೆದು ನಕಲಿ ವಿಮೆ ದಾಖಲೆಗಳನ್ನು ನೀಡಿರುವ ಕೃತ್ಯ, ಗ್ರಾಹಕನ ವಾಹನವೊಂದು ಅಪಘಾತವಾದ ಬಳಿಕವಷ್ಟೆ ಬೆಳಕಿಗೆ ಬಂದಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿದೆ.

ದಿ ನ್ಯೂ ಇಂಡಿಯಾ ಅಶುರೆನ್ಸ್ ಸಂಸ್ಥೆಯ ಮಡಿಕೇರಿ ಶಾಖೆಯ ಮೂಲಕ ಅದರ ಅಧಿಕೃತ ಏಜೆಂಟ್ ಕಟ್ಟೆಮಾಡು ಗ್ರಾಮದ ನಿವಾಸಿ ವಿಕ್ರಂ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಏಜೆಂಟ್ ವಿಕ್ರಂ ಮೂಲಕ ಗ್ರಾಹಕರಾದ ಅದೇ ಗ್ರಾಮದ ಜನಾರ್ಧನ ಎಂಬವರು ತಮ್ಮ ಮಾರುತಿ ಓಮ್ನಿ ವಾಹನಕ್ಕೆ ಫೆಬ್ರವರಿ ೨೦೨೩ ರಿಂದ ೨೦೨೪ ರವರೆಗಿನ ಅವಧಿಗೆ ಹಾಗೂ ಮಾರುತಿ ಎಸ್‌ಪ್ರೆಸೋ ವಾಹನಕ್ಕೆ ೨೦೨೨ರ ಫೆಬ್ರವರಿಯಿಂದ ೨೦೨೩ರವರೆಗಿನ ಅವಧಿಗೆ ಕ್ರಮವಾಗಿ ರೂ. ೪,೫೦೦ ಹಾಗೂ ೬,೨೦೦ ನೀಡಿ ದಿ ನ್ಯೂ ಇಂಡಿಯಾ ಅಶುರೆನ್ಸ್ ಸಂಸ್ಥೆಯ ವಿಮೆ ಮಾಡಿಸಿದ್ದಾರೆ. ಇದಕ್ಕೆ ವಿಕ್ರಂ, ಪಾಲಿಸಿ ನಂಬರ್‌ಗಳನ್ನೊಳಗೊAಡ ದಾಖಲೆಗಳನ್ನೂ ಗ್ರಾಹಕ ಜನಾರ್ಧನ್ ಅವರಿಗೆ ನೀಡಿದ್ದಾನೆ. ಎಸ್‌ಪ್ರೆಸೊ ವಾಹನಕ್ಕೆ ಇತ್ತೀಚೆಗಷ್ಟೇ ಅಪಘಾತದಲ್ಲಿ ಹಾನಿಯಾಗಿದ್ದು, ವಾಹನ ಮಾಲೀಕ ಜನಾರ್ಧನ ಅವರು ಕೂಡಲೇ ವಿಮೆ ಏಜೆಂಟ್ ವಿಕ್ರಂ ಅವರಿಗೆ ತಿಳಿಸಿದ್ದಾರೆ. ವಿಕ್ರಂ ಸೂಚನೆಯಂತೆ ಕುಶಾಲನಗರದಲ್ಲಿ ವರ್ಕ್ಶಾಪ್‌ವೊಂದರಲ್ಲಿ ವಾಹನ ಸರಿಪಡಿಸಲು ಜನಾರ್ಧನ್ ಅವರು ಕಳಿಸಿದ್ದಾರೆ. ವಿಕ್ರಂ ಸರ್ವೆ ಮಾಡುವವರನ್ನು ಕರೆತಂದು ‘ಕ್ಲೇಂ ಪ್ರೊಸೀಝರ್’ ಮಾಡಿಸಿದ್ದಾರೆ. ವಾಹನ ದುರಸ್ತಿಗೆ ಸುಮಾರು ರೂ.೭೯ ಸಾವಿರ ಹಣ ವೆಚ್ಚವಾಗಿದ್ದು, ವಾಹನ ವಿಮೆ ಹಣ ಪಡೆಯುವ ಉದ್ದೇಶದಿಂದ ವಿಮೆ ದಾಖಲೆಗಳನ್ನು ವಿಮಾ ಸಂಸ್ಥೆಯ ಮಡಿಕೇರಿ ಕಚೇರಿಗೆ ಕೊಂಡೊಯ್ದಾಗ ವಿಕ್ರಂ ನೀಡಿದ ದಾಖಲೆಗಳೆಲ್ಲವೂ ನಕಲಿ ಎಂಬುದಾಗಿ ತಿಳಿದುಬಂದಿದೆ.