ಸೋಮವಾರಪೇಟೆ, ಸೆ. ೧೨: ಗಣೇಶ ಹಬ್ಬದ ಆಚರಣೆ ಹಾಗೂ ವಿಸರ್ಜನೆಯ ಸಂದರ್ಭ ಸಮಿತಿಯ ಪದಾಧಿಕಾರಿಗಳು ತಪ್ಪದೇ ಸರ್ಕಾರ ತಿಳಿಯಪಡಿಸಿದ ನಿಯಮಗಳನ್ನು ಪಾಲಿಸಬೇಕೆಂದು ಡಿ.ವೈ.ಎಸ್.ಪಿ. ಗಂಗಾಧರಪ್ಪ ಸೂಚಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಗೌರಿ ಗಣಪತಿ ಪ್ರತಿಷ್ಠಾಪನಾ ಸಮಿತಿಗಳ ಪದಾಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗಣಪತಿ ಸಮಿತಿ ಪದಾಧಿಕಾರಿಗಳು ಒತ್ತಾಯ ಪೂರ್ವಕವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಬಾರದು. ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೊದಲು ಆಯಾ ಪಂಚಾಯಿತಿ, ಸೆಸ್ಕಾಂ, ಅಗ್ನಿಶಾಮಕ ಇಲಾಖೆಯವರಿಂದ ಪರವಾನಿಗೆ ಪಡೆಯಬೇಕು. ಸಾರ್ವಜನಿಕ ರಸ್ತೆಯಲ್ಲಿ ವಾಹನ ಮತ್ತು ಜನರು ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಗಣೇಶ, ಪ್ರತಿಷ್ಠಾಪನೆ ಮಾಡಬಾರದು ಎಂದರು.

ಖಾಸಗಿ ಮನೆ, ಅಂಗಡಿ, ದೇವಸ್ಥಾನ ಅಥವಾ ನೇರ ವಿದ್ಯುತ್ ಲೈನ್ ಮತ್ತು ಇನ್ನಾವುದೇ ರೀತಿ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಬಾರದು, ಕಡ್ಡಾಯವಾಗಿ ಜನರೇಟರ್ ಉಪಯೋಗಿಸಬೇಕು. ಪ್ರತಿ ಗಣೇಶ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಪಟ್ಟಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಸಲ್ಲಿಸಬೇಕು. ಗಣಪತಿ ಮೂರ್ತಿಗಳು, ಫ್ಲೆಕ್ಸ್, ಬ್ಯಾನರ್ ಸೇರಿದಂತೆ ಇತರ ಸಾಮಗ್ರಿಗಳ ಸುರಕ್ಷತೆ ಕುರಿತಂತೆ ಎಚ್ಚರಿಕೆ ವಹಿಸಬೇಕು.

ಭದ್ರತೆಯ ದೃಷ್ಟಿಯಿಂದ ಗಣಪತಿ ಮಂಡಳಿಯವರು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಡಿಜೆ ಬಳಕೆಗೆ ನಿರ್ಬಂಧ ವಿಧಿಸಿದ್ದು, ಇದನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಗಣಪತಿ ಪೆಂಡಾಲ್ ಬಳಿ ಬೆಳಕಿನ ವ್ಯವಸ್ಥೆ ಮಾಡಬೇಕು. ಯಾವುದೇ ಸಣ್ಣಪುಟ್ಟ ಜಗಳ-ವಾಗ್ವಾದ ಜರುಗಿದಲ್ಲಿ ಮಂಡಳಿಯವರು ಕೂಡಲೇ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಸೂಚಿಸಿದರು.

ಶಾಂತಿಯುತವಾಗಿ ಗೌರಿ ಗಣೇಶೋತ್ಸವ ನಡೆಸಲು ಪೊಲೀಸರೊಂದಿಗೆ ಸಹಕರಿಸಬೇಕು. ನಿಯಮಗಳನ್ನು ಮೀರಿದರೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ ಎಂದು ಡಿ.ವೈ.ಎಸ್.ಪಿ. ಗಂಗಾಧರಪ್ಪ ಹೇಳಿದರು. ಸಭೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ರಾಮಚಂದ್ರ ನಾಯಕ್ ಉಪಸ್ಥಿತರಿದ್ದರು.