ಸಮಸ್ಯೆಗಳತ್ತ ಮೋದಿ ಸರ್ಕಾರ ಚಿತ್ತ ಹರಿಸಲಿ : ಖರ್ಗೆ

ನವದೆಹಲಿ, ಸೆ. ೧೧: ಜಿ೨೦ ಶೃಂಗಸಭೆ ಈಗ ಮುಗಿದಿದ್ದು, ಮೋದಿ ನೇತೃತ್ವದ ಸರ್ಕಾರವು ಹಣದುಬ್ಬರ, ನಿರುದ್ಯೋಗ ಮತ್ತು ಮಣಿಪುರ ಗಲಭೆಯಂತಹ ದೇಶೀಯ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಗಮನಕ್ಕೆ ಜನರು ದಾರಿ ಮಾಡಿಕೊಡಲು ಆರಂಭಿಸಿದ್ದಾರೆ ಎಂದು ಅವರು ‘ಎಕ್ಸ್'ನಲ್ಲಿ ಹೇಳಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಳ ಕುರಿತು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯವನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ, ಆದರೆ ಸಾರ್ವಜನಿಕರು ಸತ್ಯವನ್ನು ಮಾತ್ರ ನೋಡಲು ಮತ್ತು ಕೇಳಲು ಬಯಸುತ್ತಿದ್ದಾರೆ. ಇದೀಗ ಜಿ೨೦ ಶೃಂಗಸಭೆಯೂ ಮುಗಿದಿದ್ದು, ಮೋದಿ ಸರ್ಕಾರವು ದೇಶೀಯ ಸಮಸ್ಯೆಗಳತ್ತ ಚಿತ್ತ ಹರಿಸಬೇಕು. ಆಗಸ್ಟ್ನಲ್ಲಿ ಸಾಮಾನ್ಯ 'ಥಾಲಿ'ಯ ಬೆಲೆ ಶೇ. ೨೪ರಷ್ಟು ಹೆಚ್ಚಾಗಿದ್ದರೆ, ನಿರುದ್ಯೋಗ ಸಮಸ್ಯೆ ಶೇ ೮ರಷ್ಟು ಏರಿಕೆಯಾಗಿತ್ತು ಎಂದಿರುವ ಅವರು, ದೇಶದ ಯುವ ಜನರ ಭವಿಷ್ಯ ಮಂಕಾಗಿದೆ ಎಂದಿದ್ದಾರೆ.

ನೀರು ಹಂಚಿಕೆ-ತಮಿಳುನಾಡಿನಿAದ ತೊಂದರೆ : ಸಿದ್ದರಾಮಯ್ಯ

ಮೈಸೂರು, ಸೆ. ೧೧: ಮೇಕೆದಾಟು ನಿರ್ಮಾಣಕ್ಕೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು, ಕಾವೇರಿ ನದಿಯ ಹಂಚಿಕೆ ವಿಚಾರದಲ್ಲಿ ನೆರೆಯ ತಮಿಳುನಾಡು ಅನಗತ್ಯ ತೊಂದರೆ ಉಂಟುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಒತ್ತಾಯಿಸುತ್ತಿದೆ. ಇನ್ನು ಮಳೆಯ ಸಂಕಷ್ಟದ ಸಮಯದಲ್ಲಿ ಉಭಯ ರಾಜ್ಯಗಳ ನಡುವಿನ ಕಾವೇರಿ ಜಲ ವಿವಾದಕ್ಕೆ ಇದೊಂದೇ ಪರಿಹಾರ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಮೇಕೆದಾಟು ಯೋಜನೆಗೆ ಕೇಂದ್ರದ ಬಿಜೆಪಿ ಸರ್ಕಾರ ಅನುಮತಿ ನೀಡಿಲ್ಲ. ತಮಿಳುನಾಡು ಈ ಯೋಜನೆಯನ್ನು ವಿರೋಧಿಸಲು ಯಾವುದೇ ಕಾರಣಗಳಿಲ್ಲ. ಯಾಕೆಂದರೆ ಇದು ನಮ್ಮ ಪ್ರಾಂತ್ಯದಲ್ಲಿದೆ. ತಮಿಳುನಾಡಿಗೆ ೨೫ ಟಿಎಂಸಿ ನೀರು ಹಂಚಿಕೆ ಮಾಡಲಾಗಿದ್ದು, ಸಾಮಾನ್ಯ ವರ್ಷಗಳಲ್ಲಿ ಅಷ್ಟು ನೀರು ಬಿಡಬೇಕು. ಸಂಕಷ್ಟದ ಸಮಯದಲ್ಲಿ ಸಂಕಷ್ಟ ಸೂತ್ರವನ್ನು ಅನುಸರಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಜ್ವಲ್ ಅನರ್ಹತೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು, ಸೆ. ೧೧: ಹಾಸನ ಸಂಸದ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದ ಆದೇಶಕ್ಕೆ ತಡೆ ಕೋರಿ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಜ್ವಲ್ ರೇವಣ್ಣ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರು ತೀರ್ಪನ್ನು ಕಾಯ್ದಿರಿಸಿದ್ದರು. ಇಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವವರೆಗೆ ಅನರ್ಹತೆ ಆದೇಶಕ್ಕೆ ತಡೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅನರ್ಹತೆ ಆದೇಶಕ್ಕೆ ತಡೆ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ ಅರ್ಜಿದಾರ ದೇವರಾಜೇಗೌಡ ಅವರ ಪರ ವಕೀಲರು, ಈಗಾಗಲೇ ಲೋಕಸಭೆಗೆ ಅನರ್ಹತೆ ಮಾಹಿತಿ ನೀಡಿರುವುದರಿಂದ ಆದೇಶಕ್ಕೆ ತಡೆ ನೀಡಲು ಬರುವುದಿಲ್ಲ ಎಂದು ವಾದಿಸಿದರು.

ಬೆಂಗಳೂರು ಬಂದ್ ವಾಪಸ್ : ಸಚಿವರ ಸಂಧಾನ ಯಶಸ್ವಿ

ಬೆಂಗಳೂರು, ಸೆ. ೧೧: ಅರ್ಥಿಕ ಇಲಾಖೆಗೆ ಸಂಬAಧಿಸಿದ ಬೇಡಿಕೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಈಡೇರಿಸುವ ಭರವಸೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೀಡಿದ ಕಾರಣ ರಾಜ್ಯ ಸಾರಿಗೆ ಒಕ್ಕೂಟವು ಮುಷ್ಕರವನ್ನು ಸೋಮವಾರ ಮಧ್ಯಾಹ್ನ ಹಿಂಪಡೆದುಕೊAಡಿದೆ. ‘ಶಕ್ತಿ' ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಅಥವಾ ರಸ್ತೆ ತೆರಿಗೆ ರದ್ದು ಮಾಡಬೇಕು. ರಾಪಿಡೊ ಬೈಕ್ ಟ್ಯಾಕ್ಸಿ ನಿಷೇಧಿಸಬೇಕು ಎಂಬುದೂ ಸೇರಿ ೩೦ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದು ಒಕ್ಕೂಟದ ಆಗ್ರಹವಾಗಿತ್ತು. ಭಾನುವಾರ ರಾತ್ರಿ ೧೨ ರಿಂದ ಸೋಮವಾರ ರಾತ್ರಿ ೧೨ ರವರೆಗೆ ಮುಷ್ಕರ ನಡೆಸಲು ಖಾಸಗಿ ಬಸ್, ಆಟೊ, ಟ್ಯಾಕ್ಸಿ, ಶಾಲಾ ವಾಹನ ಸಹಿತ ೩೨ ಸಂಘಟನೆಗಳ ಒಕ್ಕೂಟ ಕರೆ ನೀಡಿತ್ತು.

ಹಗರಣಗಳಿಂದ ಪಾರಾಗಲು ಹೇಳಿಕೆ : ಬಿ.ಕೆ. ಹರಿಪ್ರಸಾದ್

ಕೊಪ್ಪಳ, ಸೆ. ೧೧: ನನ್ನ ವಿರುದ್ಧ ಹೈಕಮಾಂಡ್‌ಗೆ ದೂರು ನೀಡುವವರು ಅದಕ್ಕೂ ಮೊದಲು ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲಿ, ಹಗರಣಗಳಿಂದ ಪಾರಾಗುವ ಸಲುವಾಗಿಯೇ ನನ್ನ ವಿರುದ್ಧ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು. ಕುಕನೂರು ತಾಲೂಕಿನ ತಳಬಾಳ ಗ್ರಾಮದಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯ ಉಸ್ತುವಾರಿಗೆ ದೂರು ನೀಡುವುದಾಗಿ ಕೆಲವರು ಹೇಳುತ್ತಿದ್ದಾರೆ. ದೂರು ಕೊಟ್ಟರೆ ಬಹಳ ಸಂತೋಷ. ಉಸ್ತುವಾರಿಗೆ ಮಾತ್ರ ಯಾಕೆ, ಎಲ್ಲರಿಗೂ ದೂರು ನೀಡಲಿ. ನನ್ನ ವಿರುದ್ಧ ದೂರು ನೀಡುವವರು ಮೊದಲು ತಾವು ಏನೆಂದು ತಿಳಿದು ಕೊಳ್ಳಬೇಕು. ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲು ದೂರು ನೀಡುತ್ತಿದ್ದಾರೆ ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಅಸಮಾಧಾನ ಹೊರಹಾಕಿದರು. ಅವರಿಗೆ ಹಗರಣಗಳಿಂದ ಪಾರಾಗುವ ಧೈರ್ಯವಿದ್ದರೆ ದೂರು ನೀಡುವ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಲೇ ಇರಲಿ ಎಂದರು.

ದಶಾಶ್ವಮೇಧ ಘಾಟ್‌ನಲ್ಲಿ ಮಾರಿಷಸ್‌ನ ಪ್ರಧಾನಿ ಪೂಜೆ

ವಾರಾಣಸಿ, ಸೆ. ೧೧: ಜಿ೨೦ ಸಭೆಯ ಮುಗಿಸಿದ ಬಳಿ ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಜುಗ್‌ನೌತ್ ಅವರು ಉತ್ತರ ಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್ ಪೂಜೆ ಸಲ್ಲಿಸಿದ್ದಾರೆ. ದಶಾಶ್ವಮೇಧ ಘಾಟ್ ವಾರಾಣಸಿಯ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ. ಇದು ಗಂಗಾನದಿಯ ದಡದಲ್ಲಿದೆ ಹಾಗೂ ವಿಶ್ವನಾಥ ದೇವಾಲಯಕ್ಕೆ ಹತ್ತಿರದಲ್ಲಿದೆ. ಜುಗ್‌ನೌತ್ ಮತ್ತು ಅರ್ಚಕರ ಗುಂಪು ದೋಣಿಯಲ್ಲಿ ಕುಳಿತು ಘಾಟ್‌ನಲ್ಲಿ ಪೂಜೆ ಸಲ್ಲಿಸುವ ದೃಶ್ಯಗಳಿವೆ. ವಿಶೇಷವಾಗಿ ಈ ಘಾಟ್‌ನಲ್ಲಿ ಶಿವನಿಗೆ ಮತ್ತು ಗಂಗಾನದಿಗೆ ಪೂಜೆ ಮಾಡಲಾಗುತ್ತದೆ.

ದೆಹಲಿ ಸೇವಾ ನಿಯಂತ್ರಣ ಪ್ರಶ್ನಿಸಿದ್ದ ಪಿಐಎಲ್ ವಜಾ

ನವದೆಹಲಿ, ಸೆ. ೧೧: ಲೆಫ್ಟಿನೆಂಟ್ ಗವರ್ನರ್ ಅವರಿಗೆ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣದ ಅಧಿಕಾರ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್, ಸೋಮವಾರ ನಿರಾಕರಿಸಿದೆ. ಮಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು, ತಿದ್ದುಪಡಿ ಕಾನೂನು ಪ್ರಶ್ನಿಸಿ ಈಗಾಗಲೇ ದೆಹಲಿ ಸರ್ಕಾರವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಹಾಗಾಗಿ, ಹೊಸದಾಗಿ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಹೇಳಿತು. ಈ ಆದೇಶವು ವಿಚಾರಣೆಗೆ ಬಾಕಿ ಇರುವ ದೆಹಲಿ ಸರ್ಕಾರದ ಅರ್ಜಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸ್ಪಷ್ಟಪಡಿಸಿತು. ವಕೀಲ ಮುಕೇಶ್ ಕುಮಾರ್ ಎಂಬುವರು ಸ್ವಯಂಪ್ರೇರಿತವಾಗಿ ಈ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ ೨೫ ರಂದು ಸುಪ್ರೀಂಕೋರ್ಟ್ನ ಅನುಮತಿ ಮೇರೆಗೆ ದೆಹಲಿ ಸರ್ಕಾರವು ತಿದ್ದುಪಡಿ ಅರ್ಜಿ ಸಲ್ಲಿಸಿದೆ. ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರ್ಕಾರವು ಮೇ ೧೯ ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಬಳಿಕ ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ರಾಷ್ಟç ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದಿದೆ. ಇದಕ್ಕೆ ರಾಷ್ಟçಪತಿ ಅವರು ಅಂಕಿತ ಹಾಕಿದ್ದು, ಕಾನೂನು ಸ್ವರೂಪ ಪಡೆದಿದೆ.