ಕುಶಾಲನಗರ, ಸೆ. ೧೦: ಗ್ರಾಹಕರು ಎಚ್ಚೆತ್ತುಕೊಂಡಲ್ಲಿ ಮಾತ್ರ ತಮ್ಮ ಸಮಸ್ಯೆ ಗಳಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯ ಎಂದು ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವೇಣುಗೋಪಾಲ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕುಶಾಲನಗರ ಗ್ರಾಹಕರ ವೇದಿಕೆ, ರೋಟರಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಕುಶಾಲನಗರ ಸ್ಥಾನೀಯ ಸಮಿತಿ ಸಂಯುಕ್ತ ಆಶಯದಲ್ಲಿ ನಡೆದ ವಿದ್ಯುತ್ ಬಳಕೆದಾರರ ಸಭೆಯಲ್ಲಿ ಮಾತನಾಡಿದರು. ವಿದ್ಯುತ್ ವಿತರಣಾ ಸಂಸ್ಥೆಗಳ ಮೀಟರ್ ಉನ್ನತೀಕರಣ, ಅಸಮರ್ಪಕ ಸೇವೆಯಿಂದ ಗ್ರಾಹಕರು ವಂಚನೆಗೆ ಒಳಗಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಅಧಿಕ ದರ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆದಾರರನ್ನು ಸಂಕಷ್ಟದಿAದ ಹೊರ ತರಲು ಹೋರಾಟದ ಅಗತ್ಯತೆ ಇದೆ ಎಂದರು.

ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಅಗತ್ಯವಿರುವ ಮಸೂದೆಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯ ಬೇಕಾಗಿದೆ ಎಂದ ಅವರು ಇದೀಗ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಕೆಯ ಬಗ್ಗೆ ಚಿಂತನೆ ಇರುವುದಾಗಿ ತಿಳಿಸಿದರು.

ಡಿಜಿಟಲ್ ಮೀಟರ್ ಅಳವಡಿಕೆ ಯಿಂದ ಗ್ರಾಹಕರಿಗೆ ದುಬಾರಿ ಮೊತ್ತದ ಬಿಲ್ ಬರುವಂತಾಗಿದೆ ಎಂದು ಅವರು ಮಾಹಿತಿ ನೀಡಿದರು. ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣ ಗೊಳಿಸುವತ್ತ ಕೇಂದ್ರ ರಾಜ್ಯ ಸರ್ಕಾರ ಗಳು ಹುನ್ನಾರ ನಡೆಸುತ್ತಿದೆ. ಖಾಸಗಿ ಮಾಲೀಕತ್ವಕ್ಕೆ ಹೋದಲ್ಲಿ ಸೇವೆಯ ಬದಲು ಲಾಭಾಂಶಕ್ಕೆ ಒತ್ತು ಕೊಡುವ ಸಾಧ್ಯತೆ ಅಧಿಕವಾಗಿದೆ ಎಂದರು. ಆ ಮೂಲಕ ವಿದ್ಯುತ್ ಕ್ಷೇತ್ರ ದುಬಾರಿ ಯಾಗಲಿದೆ. ಬಹುತೇಕ ನಿಗೂಢ ದರಗಳು ಜನಸಾಮಾನ್ಯರಿಗೆ ವರ್ಗವಾಗಿ ಹೊರೆಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ವಿದ್ಯುತ್ ಬಳಕೆ ದಾರರ ಸಂಘದ ಉಪಾಧ್ಯಕ್ಷರಾದ ಎಂ. ರಂಗನಾಥ್ ಮಾತನಾಡಿ ದಿನನಿತ್ಯ ಎಲ್ಲಾ ಚಟುವಟಿಕೆಗಳಿಗೆ ವಿದ್ಯುತ್ ಅಗತ್ಯ ವಾಗಿದ್ದು, ಗ್ರಾಹಕರ ಹಿತಾಸಕ್ತಿ ಕಾಪಾಡುವಲ್ಲಿ ವೇದಿಕೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ವಿದ್ಯುತ್ ವಿತರಣೆ ಮತ್ತು ಸರಬರಾಜು ಸಂದರ್ಭ ಗ್ರಾಹಕರಿಗೆ ಆಗುವ ಹೊರೆಯನ್ನು ತಪ್ಪಿಸಲು ಹೋರಾಟದ ಅನಿವಾರ್ಯತೆ ಎದುರಾಗಿದೆ ಎಂದರು. ಈ ಸಂದರ್ಭ ಹಾಸನ ಗ್ರಾಹಕರ ವೇದಿಕೆಯ ಜಿಲ್ಲಾಧ್ಯಕ್ಷ ಸಿದ್ದಯ್ಯ, ರೋಟರಿ ಅಧ್ಯಕ್ಷೆ ಸುನಿತಾ ಮಹೇಶ್, ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಎ.ಎ. ಚಂಗಪ್ಪ, ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ರವೀಂದ್ರ ರೈ ಇದ್ದರು.