ಭೂಕಂಪ - ೨ ಸಾವಿರ ದಾಟಿದ ಸಾವಿನ ಸಂಖ್ಯೆ

ಮಾರುಕೇಶ್, ಸೆ. ೧೦: ಉತ್ತರ ಅಫ್ರಿಕಾದ ಮೊರೊಕೊ ದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ೨,೦೦೦ ದಾಟಿದೆ. ೨,೦೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ ೧,೪೦೪ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೊರೊಕೊ ಆಂತರಿಕ ಸಚಿವಾಲಯ ತಿಳಿಸಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ. ನೂರಾರು ಕಟ್ಟಡಗಳು ನೆಲಸಮ ಗೊಂಡಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಮೊರೊಕೊದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಶುಕ್ರವಾರ ತಡರಾತ್ರಿ ೬.೮ ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ತಿಳಿಸಿದೆ. ತಜ್ಞರ ಪ್ರಕಾರ ಕಳೆದ ೧೨೦ ವರ್ಷಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ.

ಇಂಡೊನೇಷ್ಯಾದಲ್ಲಿ ಭೂಕಂಪ

ಜಕಾರ್ತಾ, ಸೆ. ೧೦: ಇಂಡೊನೇಷ್ಯಾದ ಸುಲವೇಸಿ ದ್ವೀಪದ ಬಳಿ ಶನಿವಾರ ರಿಕ್ಟರ್ ಮಾಪಕದಲ್ಲಿ ೬ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಸ್ಥಳೀಯ ಕಾಲಮಾನ ರಾತ್ರಿ ೯:೪೩ಕ್ಕೆ ಭೂಕಂಪ ಸಂಭವಿಸಿದೆ. ಕಂಪನದ ಕೇಂದ್ರಬಿAದು ೯.೯ ಕಿಲೋಮೀಟರ್ ಆಳದಲ್ಲಿ ಇತ್ತು. ತಕ್ಷಣಕ್ಕೆ ಸುನಾಮಿಯ ಎಚ್ಚರಿಕೆ ನೀಡಿಲ್ಲ. ಆದರೆ, ಸಂಭವನೀಯ ಭೂಕಂಪನದ ಬಗ್ಗೆ ಇಂಡೊನೇಷ್ಯಾದ ಭೂ ಭೌತವಿಜ್ಞಾನ ಸಂಸ್ಥೆ (ಬಿಎಂಕೆಜಿ) ಎಚ್ಚರಿಕೆ ನೀಡಿದೆ.

ಬಿ.ಕೆ. ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಶಾಸಕ ಆಗ್ರಹ

ಮಾಲೂರು, ಸೆ. ೧೦: ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿದೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಿದ್ದು ಬಣದ ಶಾಸಕರು ಆಗ್ರಹಿಸುತ್ತಿದ್ದಾರೆ. ಭಾನುವಾರ ಮಾಸ್ತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ವೈ. ನಂಜೇಗೌಡ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ರೀತಿಯ ಅವಕಾಶ ಪಡೆದಿರುವ ಬಿ.ಕೆ. ಹರಿಪ್ರಸಾದ್, ಈಗ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧವೇ ಮಾತನಾಡುತ್ತಿರುವುದು ಸರಿಯಲ್ಲ. ಮಂತ್ರಿ ಮಾಡಿಲ್ಲವೆಂದು ಕೊಟ್ಟ ಅವಕಾಶ ಮರೆತು ಪಕ್ಷದ ವಿರುದ್ದವೇ ಮಾತನಾಡುವುದು ಖಂಡನೀಯ ಎಂದರು.

ವಿಚಾರಣಾಧೀನ ಕೈದಿಗಳಿಂದ ಪ್ರತಿಭಟನೆ

ಕೋಲಾರ, ಸೆ. ೧೦: ಕೆಜಿಎಫ್ ನಗರದ ಕಾರಾಗೃಹದಿಂದ ಚಿಂತಾಮಣಿ ಜೈಲಿಗೆ ಸ್ಥಳಾಂತರಕ್ಕೆ ಮುಂದಾದ ಅಧಿಕಾರಿಗಳ ಕ್ರಮ ಖಂಡಿಸಿ ಎಂಟು ಮಂದಿ ವಿಚಾರಣಾಧೀನ ಕೈದಿಗಳು ಜೈಲಿನ ಬ್ಯಾರಕ್ ಮೇಲೆ ಹತ್ತಿ ಧರಣಿ ನಡೆಸಿದರು. ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿರುವ ರೌಡಿ ರೀಗನ್ ಸೇರಿದಂತೆ ಅರು ಮಂದಿ ಸ್ಥಳೀಯ ವಿಚಾರಣಾಧೀನ ಕೈದಿಗಳು ಮತ್ತು ಪುದುಚೇರಿ ಮೂಲದ ಇಬ್ಬರು ವಿಚಾರಣಾಧೀನ ಕೈದಿಗಳು ಜೈಲಿನ ಬಿ ಬ್ಯಾರಕ್ ಮೇಲೆ ಹತ್ತಿ ಸ್ಥಳಾಂತರ ವಿರೋಧಿಸುತ್ತಿದ್ದಾರೆ. ‘ಚಿಂತಾಮಣಿ ಜೈಲಿಗೆ ಹೋಗುವುದಿಲ್ಲ' ಎಂದು ಪಟ್ಟು ಹಿಡಿದಿದ್ದಾರೆ. ಜೈಲಿನಲ್ಲಿ ಸದಾ ಗಲಾಟೆ ಮಾಡುತ್ತಿದ್ದ ಈ ಎಂಟು ಮಂದಿಯನ್ನು ನ್ಯಾಯಾಧೀಶರ ಅನುಮತಿ ಪಡೆದು ಚಿಂತಾಮಣಿ ಜೈಲಿಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.

ಚಂದ್ರಬಾಬು ನಾಯ್ಡುಗೆ ೧೪ ದಿನ ನ್ಯಾಯಾಂಗ ಬಂಧನ

ಆAಧ್ರಪ್ರದೇಶ, ಸೆ. ೧೦: ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಬಂಧಿತರಾಗಿರುವ ಅಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ೧೪ ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸಿಐಡಿ ಪೊಲೀಸರು ಶನಿವಾರ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದರು. ಇಂದು ವಿಜಯವಾಡದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ನ್ಯಾಯಾಲಯಕ್ಕೆ ನಾಯ್ಡು ಅವರನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್ ೨೩ರವರೆಗೆ ೧೪ ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಚಂದ್ರಬಾಬು ನಾಯ್ಡು ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಸಿದ್ದಾರ್ಥ್ ಲೂಥಾ ಹಾಗೂ ವಕೀಲರ ತಂಡ ವಾದ ಮಂಡಿಸಿದ್ದರು. ಚಂದ್ರಬಾಬು ನಾಯ್ಡು ಅವರು ಕೌಶಲ ಅಭಿವೃದ್ಧಿ ನಿಗಮದ ೧೩೭೧ ಕೋಟಿ ಹಣವನ್ನು ದುರುಪಯೋಗ ಮಾಡಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.

ವೈಮಾನಿಕ ದಾಳಿ-೪೦ಕ್ಕೂ ಹೆಚ್ಚು ಮಂದಿ ಸಾವು

ಕೈರೊ, ಸೆ. ೧೦: ದಕ್ಷಿಣ ಖಾರ್ಟೂಮ್‌ನ ಮಾರುಕಟ್ಟೆಯೊಂದರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದ್ದು ಕನಿಷ್ಠ ೪೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಸ್ಥಳೀಯ ತುರ್ತು ಕೊಠಡಿ ಭಾನುವಾರ ಹೇಳಿಕೆಯಲ್ಲಿ ಪ್ರಕಟಿಸಿದೆ. ಏಪ್ರಿಲ್ ೧೫ರಿಂದ ಸುಡಾನ್‌ನಲ್ಲಿ ಆರಂಭವಾದ ಆಂತರಿಕ ಯುದ್ಧದಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಈವರೆಗೆ ೭,೫೦೦ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

‘ಯಡಿಯೂರಪ್ಪ ಕಡೆಗಣನೆ ಬಿಜೆಪಿ ಸೋಲಿಗೆ ಕಾರಣ’

ದಾವಣಗೆರೆ, ಸೆ. ೧೦: ಬಿಜೆಪಿಗೆ ಸಾಕಷ್ಟು ಹಾನಿಯಾದ ಬಳಿಕ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಂದೆ ತಂದಿದ್ದಾರೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬAತೆ ಯಡಿಯೂರಪ್ಪ ನೋಡದ ಹಳ್ಳಿಗಳು ಇಲ್ಲ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ದೇಶಕ್ಕೆ ನರೇಂದ್ರ ಮೋದಿ ಅವರಂತೆ ರಾಜ್ಯಕ್ಕೆ ಯಡಿಯೂರಪ್ಪ ಅವಶ್ಯಕ. ಹೋರಾಟಕ್ಕೆ, ಚುನಾವಣಾ ಪ್ರವಾಸಕ್ಕೆ, ಮತಗಳಿಗೆ ಯಡಿಯೂರಪ್ಪ ಬೇಕಾಗಿದೆ. ಯಡಿಯೂರಪ್ಪ ಕಡೆಗಣಿಸಿದ್ದೆ ಪಕ್ಷದ ಸೋಲಿಗೆ ಕಾರಣ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಆಗದೇ ಇರುವವರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರ ಮುಖ ನೋಡಿ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ ಎಂದು ವ್ಯಂಗ್ಯವಾಡಿದರು.

ಎಲ್ಲರನ್ನೂ ಒಗ್ಗೂಡಿಸುವುದು ಭಾರತ - ಮೋಹನ್ ಭಾಗವತ್

ಲುಧಿಯಾನ, ಸೆ. ೧೦: ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವುದರಲ್ಲಿ ಭಾರತ ನಂಬಿಕೆ ಇಟ್ಟಿದೆ. ವಿಶ್ವದ ಹಲವು ರಾಷ್ಟçಗಳು ಇಂದು ಭಾರತದತ್ತ ನೋಡುತ್ತಿವೆ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಸದ್ಗುರು ಪ್ರತಾಪ್ ಸಿಂಗ್ ಮತ್ತು ಮಾತಾ ಭೂಪಿಂದರ್ ಕೌರ್ ಅವರ ಸ್ಮರಣಾರ್ಥ ನಾಮಧಾರಿ ಮಿಷನ್ ಭಾನುವಾರ ಲುಧಿಯಾನದ 'ಭೈನಿ ಸಾಹಿಬ್'ನಲ್ಲಿ ಆಯೋಜಿಸಿದ್ದ ಸಭೆ ಉದ್ದೇಶಿಸಿ ಭಾಗವತ್ ಮಾತನಾಡಿದರು. ವಿಶ್ವದಲ್ಲಿ ಸಮತೋಲನ ಸಾಧಿಸುವ ಕೆಲಸವನ್ನು ಭಾರತ ಮಾಡುತ್ತಿದೆ. ತನ್ನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಭಾರತ ಸ್ವಾರ್ಥಿ ರಾಷ್ಟçವಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ತತ್ವದಲ್ಲಿ ನಂಬಿಕೆ ಇರಿಸಿದೆ. ಸಮಾಜದ ವಿಭಜಕ ಶಕ್ತಿಗಳು ದೇಶವನ್ನು ಮಾತ್ರವಲ್ಲದೆ ಜಗತ್ತನ್ನೂ ಹಾನಿಗೊಳಿಸುತ್ತಿವೆ. ಅವುಗಳ ವಿರುದ್ಧ ಜಂಟಿಯಾಗಿ ಹೋರಾಡಬೇಕು. ಭಾರತವು ಇಡೀ ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಬೇಕಿದೆ. ಅದೇ ಸಂದರ್ಭದಲ್ಲಿ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕು ಎಂದು ಭಾಗವತ್ ಹೇಳಿದರು.