ಸಿದ್ದಾಪುರ, ಸೆ. ೮: ತಾ.೧೧ರಂದು ಮಡಿಕೇರಿಯ ಅರಣ್ಯ ಭವನದ ಎದುರು ವನ್ಯಜೀವಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದ ರೈತರ ಮತ್ತು ಕಾರ್ಮಿಕರ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುವುದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳು ನಿರ್ಧರಿಸಿದ್ದಾರೆ. ಸಿದ್ದಾಪುರದ ಸ್ವರ್ಣಮಾಲಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಾರ್ಮಿಕರ ಸಂಘದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಕಾನೂನು ಸಲಹೆಗಾರರಾದ ಕೆ.ಬಿ. ಹೇಮಚಂದ್ರ, ಸರ್ಕಾರದ ವತಿಯಿಂದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಮೃತಪಟ್ಟವರಿಗೆ ವರ್ಷಂಪ್ರತಿ ಸೆ.೧೧ಕ್ಕೆ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಿದೆ. ಅರಣ್ಯ ಭವನದಲ್ಲಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸೆ.೧೧ರಂದು ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ರೈತರ ಹಾಗೂ ಕಾರ್ಮಿಕರ ಭಾವಚಿತ್ರಗಳನ್ನು ಇಟ್ಟು ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಹುತಾತ್ಮರ ದಿನಾಚರಣೆಯನ್ನು ಅಂದೇ ಆಚರಿಸಲಾಗುವುದೆಂದರು.

ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ವನ್ಯಜೀವಿಗಳ ಹಾವಳಿ ಮಿತಿಮೀರಿದೆ. ವನ್ಯಜೀವಿಗಳ ದಾಳಿಗೆ ಸಿಲುಕಿ ಹಲವಾರು ಮಂದಿ ರೈತರು ಹಾಗೂ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಳೆದ ಒಂದು ತಿಂಗಳಿನ ಒಳಗೆ ನಾಲ್ಕು ಮಂದಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಸರ್ಕಾರವು ಕೇವಲ ರೂ.೧೫ ಲಕ್ಷ ಪರಿಹಾರ ಹಣ ನೀಡಿ ಕೈತೊಳೆದುಕೊಳ್ಳುತ್ತದೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ವನ್ಯಜೀವಿಗಳ ಹಾವಳಿಯಿಂದಾಗಿ ಸಂಜೆ ಸಮಯದಲ್ಲಿ ಜನ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಮಂಡೇಪAಡ ಪ್ರವೀಣ್ ಬೋಪಯ್ಯ ಮಾತನಾಡಿ, ತಾ. ೧೧ರಂದು ಮಡಿಕೇರಿ ಅರಣ್ಯ ಭವನದ ಎದುರು ವನ್ಯ ಜೀವಿಗಳ ದಾಳಿಗೆ ಸಿಲುಕಿ ಮೃತಪಟ್ಟ ರೈತರಿಗೆ ಹಾಗೂ ಕಾರ್ಮಿಕರಿಗೆ ಶ್ರದ್ಧಾಂಜಲಿಯನ್ನು ಬೆಳಿಗ್ಗೆ ೧೧ ಗಂಟೆಗೆ ಅರ್ಪಿಸಲಾಗುವುದು. ನಂತರ ಆ ದಿನ ರೈತ ಸಂಘದ ಹಾಗೂ ಕಾರ್ಮಿಕ ಸಂಘಟನೆಗಳ ಪ್ರಮುಖರ ನೇತೃತ್ವದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದೆಂದರು.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷೆ ದೇವಣಿರ ಬೋಪಣ್ಣ ವಹಿಸಿದ್ದರು. ಸಭೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪದಾಧಿಕಾರಿಗಳಾದ ನಡಿಕೇರಿಯಂಡ ಮಾಚಯ್ಯ, ಸಭಿತಾ ಭೀಮಯ್ಯ ಇನ್ನಿತರರು ಹಾಜರಿದ್ದರು.