ಮಡಿಕೇರಿ, ಸೆ. ೮ : ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಸತತ ಪರಿಶ್ರಮ ಪಡುತ್ತಿರುವ ಶಿಕ್ಷಕ ವೃಂದದ ನೆರವಿಗೆ ಸರ್ಕಾರದೊಂದಿಗೆ ಸಮಾಜಬಾಂಧವರು ಕೂಡ ಮುಂದಾಗುವ ಮೂಲಕ ಶಿಕ್ಷಕರಿಗೆ ಸಲ್ಲಬೇಕಾದ ಗೌರವವನ್ನು ಸಮರ್ಪಿಸಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಹೇಳಿದ್ದಾರೆ.

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ರೋಟರಿಯ ಪ್ರತಿಷ್ಠಿತ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಸಾಧಕರಾದ ಐವರು ಶಿಕ್ಷಕರಿಗೆ ಪ್ರದಾನ ಮಾಡಿ ಮಂಥರ್ ಗೌಡ ಮಾತನಾಡಿದರು.

ಜೀವನವಿಡೀ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಎಲ್ಲಾ ಸುಖ ಸಂತೋಷಗಳನ್ನೂ ಶಿಕ್ಷಕರು ಬದಿಗಿಡುತ್ತಾರೆ. ವಿದ್ಯೆ ಕಲಿಸುವುದೇ ಶಿಕ್ಷಕರಿಗೆ ಮುಖ್ಯ ಉದ್ದೇಶದಂತಿರುತ್ತದೆ. ಇಂಥ ಪರಿಶ್ರಮದ ಕಾಯಕ ಜೀವಿಗಳ ಸೇವೆಯನ್ನು ಸಮಾಜ ಯಾವುದೇ ಕಾರಣಕ್ಕೂ ಮರೆಯಬಾರದು ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ಅಂತರರಾಷ್ಟಿçÃಯ ರೋಟರಿ ಸಂಸ್ಥೆಯು ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿದ್ದು, ಪ್ರತೀ ವರ್ಷದ ಸೆಪ್ಟೆಂಬರ್ ತಿಂಗಳನ್ನು ಸಾಧಕ ಶಿಕ್ಷಕರನ್ನು ಗುರುತಿಸಿ ಅವರ ಸೇವೆಗೆ ಸನ್ಮಾನ ಮಾಡುವ ಕಾರ್ಯಕ್ಕೆ ಮುಡಿಪಾಗಿರಿಸಿದೆ. ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ಉತ್ತಮ ಸಾಧನೆ ಮಾಡಿದ ಶಿಕ್ಷಕ, ಶಿಕ್ಷಕಿಯರ ಬಗ್ಗೆ ಪರಿಶೀಲಿಸಿ ಪ್ರತೀ ವರ್ಷದಂತೆ ಈ ವರ್ಷವೂ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕ, ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ ನೀಡುತ್ತಿದೆ ಎಂದರು.

ಕಾರ್ಯಕ್ರಮ ಸಂಚಾಲಕ, ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ಮಾತನಾಡಿ, ಕಳೆದ ೮ ವರ್ಷಗಳಲ್ಲಿ ರೋಟರಿ ಮಿಸ್ಟಿ ಹಿಲ್ಸ್ ೫೦ ಸಾಧಕ ಶಿಕ್ಷಕ, ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿದೆ, ಮಿಸ್ಟಿ ಹಿಲ್ಸ್ನ ೧೯ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕರು ಈ ಪ್ರಶಸ್ತಿಯನ್ನು ನೀಡಿದ್ದಾರೆ ಎಂದು ಹೇಳಿದರು.

ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ ವೇದಿಕೆಯಲ್ಲಿದ್ದರು. ರೋಟರಿಯ ಪ್ರಮುಖರಾದ ಬಿ.ಜಿ. ಅನಂತಶಯನ, ಎ.ಕೆ. ವಿನೋದ್, ಎಂ. ಧನಂಜಯ, ಗಾನಾ ಪ್ರಶಾಂತ್ ಸನ್ಮಾನಿತರ ಪರಿಚಯ ಮಾಡಿದರು. ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ ,ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಡಾ. ರವಿ ಅಪ್ಪಾಜಿ, ಮಡಿಕೇರಿ ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಮಡಿಕೇರಿ ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎ.ಕೆ. ನವೀನ್, ಮಡಿಕೇರಿ ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ಪ್ರಾಂಶುಪಾಲೆಯಾಗಿರುವ ಶಿಕ್ಷಣ ಕ್ಷೇತ್ರದಲ್ಲಿ ೫೦ ವರ್ಷಗಳಿಗೂ ಮಿಕ್ಕಿ ಸಾಧನೆ ಮಾಡಿರುವ ಮೇರಿ ಫಾತಿಮಾ, ಮಡಿಕೇರಿಯ ನಿವೃತ್ತ ಶಿಕ್ಷಕಿ ಮಡಿಕೇರಿಯ ದೇವಕಿ, ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ಶ್ರೀಕೃಷ್ಣ ಭಟ್, ಮಡಿಕೇರಿಯ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಕಲ್ಲುಮಾಡಂಡ ಸರಸ್ವತಿ, ಮಡಿಕೇರಿ ಸಂತ ಮೈಕಲರ ಶಾಲೆಯ ದೈಹಿಕ ಶಿಕ್ಷಕಿ ಸಗಯಮೇರಿ ಅವರಿಗೆ ೨೦೨೩ನೇ ಸಾಲಿನ ನೇಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿ ಡಾ. ಮಂಥರ್ ಗೌಡ ಸನ್ಮಾನಿಸಿದರು.