(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಸೆ. ೮: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಪರಿಷ್ಕೃತ ಪುನರ್‌ವಿಂಗಡಣೆ ಹಾಗೂ ಗಡಿಗಳ ಮಾರ್ಗಸೂಚಿ ಪ್ರಕಟಿಸಿದ್ದು, ಸೆಪ್ಟೆಂಬರ್ ೧೯ ಸಂಜೆ ೦೫ ಗಂಟೆಯವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ರಾಜ್ಯ ಚುನಾವಣಾ ಆಯೋಗವು ಸದ್ದಿಲ್ಲದೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಸುವ ಸಿದ್ಧತೆ ನಡೆಸುತ್ತಿದೆ. ಬಹುಶಃ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಈ ಹಿಂದಿನ ಬಿಜೆಪಿ ಸರ್ಕಾರವು ಅವಧಿ ಮುಗಿದ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ತೀರ್ಮಾನ ಮಾಡಲು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. ಬಿಜೆಪಿ ಸರ್ಕಾರ ಅವಧಿಯಲ್ಲಿ ಜನವರಿ ತಿಂಗಳಲ್ಲಿ ಸೀಮಾ ನಿರ್ಣಯ ಆಯೋಗವು ಕ್ಷೇತ್ರಗಳ ಪುನರ್‌ವಿಂಗಡಣೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ದೊಡ್ಡ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷಿö್ಮÃನಾರಾಯಣ ಆಯೋಗವು ಪ್ರಕಟಿಸಿದ್ದ ಕರಡುಪಟ್ಟಿಯನ್ನು ಬದಲಾಯಿಸಿ ಇದೀಗ ಕಾಂಗ್ರೆಸ್ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್ ಕಾಂಬ್ಳೆ ನೇತೃತ್ವದಲ್ಲಿ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಸಿದ್ಧಪಡಿಸಿರುವ ಕರಡು ಪಟ್ಟಿಯಲ್ಲಿ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗದೆ ಜಿಲ್ಲೆಯ ಜನತೆಗೆ ನಿರಾಸೆಯುಂಟಾಗಿದೆ.

ಒಟ್ಟು ೨೯ ಕ್ಷೇತ್ರಗಳಿದ್ದ ಕೊಡಗಿನಲ್ಲಿ ಜನವರಿ ತಿಂಗಳಲ್ಲಿ ಪ್ರಕಟಗೊಂಡ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ೨೫ ಕ್ಷೇತ್ರಕ್ಕೆ ಇಳಿಸಲಾಗಿತ್ತು. ನಾಲ್ಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಕಡಿತಗೊಳಿಸಲಾಗಿತ್ತು.

ಇದೀಗ ಹೊಸದಾಗಿ ಪ್ರಕಟಗೊಂಡಿರುವ ಕ್ಷೇತ್ರಗಳ ಪುನರ್‌ವಿಂಗಡಣೆ ಪಟ್ಟಿಯಲ್ಲಿ ಮತ್ತೆ ೨೫ ಜಿಲ್ಲಾ ಪಂಚಾಯತ್ ಏಕಸದಸ್ಯ ಕ್ಷೇತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜನವರಿ ತಿಂಗಳಲ್ಲಿ ಪ್ರಕಟಗೊಂಡಿದ್ದ ಸೀಮಾ ನಿರ್ಣಯ ಆಯೋಗದಲ್ಲಿ ಕೊಡಗು ಜಿಲ್ಲೆಯ ೨೦೧೬ರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿದ್ದ ಕ್ಷೇತ್ರಗಳ ಹೆಸರು ಹಾಗೂ ಪಂಚಾಯತ್‌ಗಳು ಅದಲು-ಬದಲಾಗಿತ್ತು. ಆದರೆ ಇದೀಗ ಬಹುತೇಕ ೨೦೧೬ ರಲ್ಲಿ ಇದ್ದ ಕ್ಷೇತ್ರಗಳ ಮಾದರಿಯಲ್ಲಿಯೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಕೆಲವೊಂದು ಕ್ಷೇತ್ರಗಳನ್ನು ಪುನರ್‌ವಿಂಗಡಿಸುವಾಗ ಎಡವಟ್ಟುವುಂಟಾಗಿದ್ದು, ಕ್ಷೇತ್ರಕ್ಕೆ ಹತ್ತಿರವಲ್ಲದ ಗ್ರಾಮಪಂಚಾಯಿಗಳನ್ನು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಲಾಗಿದೆ.

(ಮೊದಲ ಪುಟದಿಂದ)

ಮರಳಿ ಹಳೆಯ ಕ್ಷೇತ್ರಕ್ಕೆ

೨೦೨೩ರ ಜನವರಿಯಲ್ಲಿ ಸೀಮಾ ಗಡಿ ನಿರ್ಣಯ ಆಯೋಗವು ಕ್ಷೇತ್ರಗಳ ಹೆಸರು, ಗಡಿಯನ್ನು ಬದಲಾಯಿಸಿ ಸಂಪೂರ್ಣ ಹೊಸ ಕ್ಷೇತ್ರಗಳನ್ನು ನಿರ್ಮಿಸಿತ್ತು. ಆದರೆ ಸೆಪ್ಟೆಂಬರ್ ೫ ರಂದು ಹೊಸದಾಗಿ ಪ್ರಕಟಗೊಂಡಿರುವ ಕರಡು ಪ್ರತಿಯಲ್ಲಿ, ೨೦೧೬ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿದ್ದ ಕ್ಷೇತ್ರಗಳ ಹೆಸರು ಹಾಗೂ ಗಡಿಯನ್ನು ಗುರುತಿಸಲಾಗಿದೆ. ೨೦೨೩ ಜನವರಿಯಲ್ಲಿ ಪ್ರಕಟಗೊಂಡ ಕ್ಷೇತ್ರಗಳ ಪಟ್ಟಿಯಲ್ಲಿ ಸಿದ್ದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಬದಲಾಯಿಸಿ ಕರಡಿಗೋಡು ಕ್ಷೇತ್ರವನ್ನು ಹೊಸದಾಗಿ ನಿರ್ಮಿಸಲಾಗಿತ್ತು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕುಶಾಲನಗರ ಪುರಸಭೆಗೆ ಸೇರಿಸಲಾಗಿದೆ. ಆದರೆ ಕೂಡಮಂಗಳೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮುಳ್ಳುಸೋಗೆ ಗ್ರಾಮ ಪಂಚಾಯತಿಯನ್ನು ಸೇರಿಸಿ ಸೀಮಾ ನಿರ್ಣಯ ಆಯೋಗವು ದೊಡ್ಡ ಎಡವಟ್ಟು ಮಾಡಲಾಗಿತ್ತು.

ಅದಲ್ಲದೇ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಗಡಿ ಗುರುತಿಸಲಾಗಿತ್ತು. ಆದರೆ ಇದೀಗ ಹಳೆಯ ಮಾದರಿಯಲ್ಲಿ ಕ್ಷೇತ್ರಗಳ ಗಡಿ ಹಾಗೂ ಹೆಸರು ನೀಡಲಾಗಿದೆ. ಆದರೆ ಹೊಸದಾಗಿ ಪ್ರಕಟಗೊಂಡಿರುವ ಕ್ಷೇತ್ರಗಳ ಪುನರ್‌ವಿಂಗಡಣೆ ಕರಡು ಪಟ್ಟಿಯಲ್ಲಿ ಕೆಲವೊಂದು ಎಡವಟ್ಟುಗಳು ಇದ್ದು, ಹೊಸ ಆದೇಶಕ್ಕೂ ಜಿಲ್ಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸುಂಟಿಕೊಪ್ಪ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಹತ್ತಿರವೇ ಇರುವ ಕೆದಕಲ್ ಗ್ರಾಮ ಪಂಚಾಯಿತಿ ಹಾಗೂ ಹೊರೂರು ಗ್ರಾಮವನ್ನು ೪೦ ಕಿಲೋಮೀಟರ್ ದೂರದ ವಾಲ್ನೂರು ತ್ಯಾಗತ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸೇರಿಸಲಾಗಿದೆ. ಈ ಹಿಂದೆ ಇದ್ದ ಗುಡ್ಡೆಹೊಸೂರು ಕ್ಷೇತ್ರವನ್ನು ಬದಲಾಯಿಸಿದ್ದು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಯಾವ ಕ್ಷೇತ್ರಕ್ಕೆ ಒಳಪಡುತ್ತೆ ಎಂದು ಗುರುತಿಸಲಾಗಿಲ್ಲ.

ಗುಡ್ಡೆಹೊಸೂರು ಕ್ಷೇತ್ರಕ್ಕೆ ಒಳಪಟ್ಟಿದ್ದ ಗ್ರಾಮ ಪಂಚಾಯಿತಿಗಳನ್ನು ವಾಲ್ನೂರು ತ್ಯಾಗತ್ತೂರು, ಕೂಡುಮಂಗಳೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂತೂರು ಮೂರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಕತ್ತೂರು ಗ್ರಾಮ ಪಂಚಾಯಿತಿಯನ್ನು ಸೇರಿಸಲಾಗಿದೆ.

ವೀರಾಜಪೇಟೆ ವಿಧಾಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹೊದ್ದೂರು, ಹೊದವಾಡ, ಕುಂಬಳದಾಳು ಗ್ರಾಮಗಳನ್ನು ಸೇರಿಸುವ ಮೂಲಕ ಮತ್ತೆ ಎಡವಟ್ಟು ಮಾಡಲಾಗಿದೆ. ಆದರೆ ಕೊಡಗಿನಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ೨೫ ಕ್ಕೆ ಇಳಿಸಲಾಗಿದೆ. ಕೆಲವೊಂದು ಗ್ರಾಮಗಳನ್ನು ಯಾವ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಳಪಡುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸದೆ, ಜನರನ್ನು ಆಯೋಗ ಗೊಂದಲ ಕ್ಕೀಡುಮಾಡಿದ್ದಾರೆ.

ಜಿ.ಪಂ. ಕ್ಷೇತ್ರಗಳ ತಾಲೂಕುವಾರು ಸಂಖ್ಯೆ

ಮಡಿಕೇರಿ ೬, ವೀರಾಜಪೇಟೆ ೪, ಕುಶಾಲನಗರ ೪, ಸೋಮವಾರಪೇಟೆ ೫, ಪೊನ್ನಂಪೇಟೆ ೬, ಒಟ್ಟು ೨೫

ತಾ. ಪಂ. ಕ್ಷೇತ್ರಗಳ ಸಂಖ್ಯೆ

ಮಡಿಕೇರಿ ತಾಲೂಕು ೧೨, ವೀರಾಜಪೇಟೆ ೯, ಸೋಮವಾರಪೇಟೆ ೯, ಕುಶಾಲನಗರ ೯, ಪೊನ್ನಂಪೇಟೆ ೧೧, ಒಟ್ಟು ೫೦.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಹೆಸರು

ಮಡಿಕೇರಿ ತಾಲೂಕು: ಮಕ್ಕಂದೂರು, ಕಾಂತೂರು ಮೂರ್ನಾಡು, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಚೆಯ್ಯಂಡಾಣೆ (ನರಿಯಂದಡ). ಸೋಮವಾರಪೇಟೆ ತಾಲೂಕು: ಕೊಡ್ಲಿಪೇಟೆ, ಗೋಪಾಲಪುರ, ಬೇಳೂರು ಬಸವನಹಳ್ಳಿ, ಶಾಂತಳ್ಳಿ, ಮಾದಾಪುರ

ಕುಶಾಲನಗರ ತಾಲೂಕು : ವಾಲ್ನೂರು-ತ್ಯಾಗತ್ತೂರು, ಕೂಡಮಂಗಳೂರು, ಸುಂಟಿಕೊಪ್ಪ, ಕೂಡಿಗೆ.

ವೀರಾಜಪೇಟೆ ತಾಲೂಕು: ಕದನೂರು, ಚೆನ್ನಯ್ಯನಕೋಟೆ, ಸಿದ್ದಾಪುರ, ಕಾಕೋಟುಪರಂಬು.

ಪೊನ್ನAಪೇಟೆ ತಾಲೂಕು: ಬಾಳೆಲೆ, ಗೋಣಿಕೊಪ್ಪಲು, ತಿತಿಮತಿ, ಶ್ರೀಮಂಗಲ, ಪೊನ್ನಂಪೇಟೆ, ಕುಟ್ಟ.