ಸೋಮವಾರಪೇಟೆ, ಸೆ. ೭ : ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಸೋಮವಾರಪೇಟೆ ಯನ್ನು ಕೈಬಿಟ್ಟಿರುವ ಬಗ್ಗೆ ಮಾಹಿತಿಯಿದ್ದು, ತಕ್ಷಣ ಜಿಲ್ಲಾಡಳಿತ ಸೋಮವಾರಪೇಟೆಯನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ತಾಲೂಕು ಬೆಳೆಗಾರರ ಸಂಘ ಆಗ್ರಹಿಸಿದೆ.
ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಅವರು, ವಾಡಿಕೆಗಿಂತ ಪ್ರಸಕ್ತ ಸಾಲಿನಲ್ಲಿ ಶೇ.೫೦ರಷ್ಟು ಮಳೆಯ ಕೊರತೆ ಯಾಗಿದೆ. ಕಾಫಿ ಫಸಲು ಬೀಜಕಟ್ಟುವ ಹಂತದಲ್ಲಿ ಮಳೆಯಿಲ್ಲದಂತಾಗಿದೆ. ಕರಿಮೆಣಸು ಫಸಲು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ಫಸಲು ಕೈ ಸೇರುವುದು ಸಂಶಯವಾಗಿದೆ. ಇದರೊಂದಿಗೆ ಇತರ ಬೆಳೆಗಳೂ ಸಹ ಅನಾವೃಷ್ಟಿಗೆ ತುತ್ತಾಗುತ್ತಿವೆ. ಈ ಹಿನ್ನೆಲೆ ಸೋಮವಾರಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಇದರೊಂದಿಗೆ ವಿಶೇಷ ಅನುದಾನ ಘೋಷಿಸಿ ಕಾಫಿ ಬೆಳೆಗಾರರ ಸಂಕಷ್ಟವನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು. ಕಾಫಿ ಕೃಷಿಗೆ ಪುನಶ್ಚೇತನ ನೀಡಬೇಕು ಎಂದ ಅವರು, ಇದೀಗ ಕೂಲಿ ಕಾರ್ಮಿಕರ ವೇತನ ಹೆಚ್ಚಳ, ಉತ್ಪಾದನಾ ವೆಚ್ಚ ಅಧಿಕವಾಗುತ್ತಿದ್ದು, ಬೆಳೆಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಪ್ರಮುಖ ಬೆಳೆಗಳ ಉತ್ಪಾದನೆಯಲ್ಲಿ ವೈಪರೀತ್ಯವಾದರೆ ಇತರ ವಲಯಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದರು.
ಸೋಮವಾರಪೇಟೆಯಿಂದ ಕುಶಾಲನಗರ ತಾಲೂಕು ವಿಂಗಡಣೆಯಾದರೂ ಹಲವಷ್ಟು ದಾಖಲೆಗಳು ಇನ್ನೂ ಇಲ್ಲೇ ಉಳಿದುಕೊಂಡಿದೆ. ಇಲ್ಲಿನ ಕೆಲವೊಂದು ದಾಖಲೆಗಳು ಕುಶಾಲನಗರಕ್ಕೆ ಹೋಗಿವೆ. ಇದರಿಂದಾಗಿ ಭೂಮಿಗೆ ಸಂಬAಧಿಸಿದAತೆ ರೈತರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಗೋಷ್ಠಿಯಲ್ಲಿದ್ದ ಸಂಘದ ಉಪಾಧ್ಯಕ್ಷ ಬಿ.ಎಂ. ಲವ ಒತ್ತಾಯಿಸಿದರು.
೩೦-೪೦ ವರ್ಷಗಳಿಂದ ಸೋಮವಾರಪೇಟೆಯಲ್ಲಿ ಸೆಟಲ್ಮೆಂಟ್ ಸರ್ವೆ ಆಗಿಲ್ಲ. ಇದರಿಂದಾಗಿ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ರೈತರು ದಿನನಿತ್ಯ ಕಚೇರಿಗೆ ಅಲೆದು ಸುಸ್ತಾಗುತ್ತಿದ್ದಾರೆ. ಸೆಟಲ್ಮೆಂಟ್ ಸರ್ವೆ ಮಾಡಲು ಕ್ಷೇತ್ರದ ಶಾಸಕ ಡಾ. ಮಂಥರ್ಗೌಡ ಹಾಗೂ ಕಂದಾಯ ಸಚಿವರು ತುರ್ತು ಗಮನ ಹರಿಸಬೇಕೆಂದು ಆಗ್ರಹಿಸಿದರು.
ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಎಲ್ಲರಿಗೂ ೨೦೦ ಯೂನಿಟ್ವರೆಗೆ ಉಚಿತ ವಿದ್ಯುತ್ ಘೋಷಣೆ ಮಾಡಿದ್ದರು. ಇದೀಗ ಸರ್ಕಾರ ಬಂದ ನಂತರ ವಿದ್ಯುತ್ ಬಿಲ್ಗಳನ್ನು ನೀಡಿ ಶುಲ್ಕ ವಸೂಲಾತಿ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಸ್ಥಳೀಯ ಶಾಸಕರು, ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ತಿಂಗಳಿಗೆ ೨೦೦ ಯೂನಿಟ್ವರೆಗೆ ಎಲ್ಲರಿಗೂ ಉಚಿತ ವಿದ್ಯುತ್ ನೀಡಬೇಕೆಂದು ಸಂಘದ ಉಪಾಧ್ಯಕ್ಷ ಕೆ.ಪಿ. ಬಸಪ್ಪ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಸಿ. ಪ್ರಕಾಶ್, ನಿರ್ದೇಶಕರಾದ ಅನಂತ್ರಾಮ್, ಪೂವಮ್ಮ ಗುರಪ್ಪ ಅವರುಗಳು ಉಪಸ್ಥಿತರಿದ್ದರು.