ಮಡಿಕೇರಿ, ಸೆ. ೭ : ಕೇಂದ್ರದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಪಿಐಎಂ ಪಕ್ಷ ನಗರದ ಜಿಲ್ಲಾಡಳಿತದ ಭವನ ಎದುರು ಪ್ರತಿಭಟಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿತು.
ಹಲವು ಭರವಸೆಗಳನ್ನು ನೀಡಿ ಅಧಿಕಾರ ಪಡೆದ ಬಿಜೆಪಿ ಇಂದು ಜನರ ಶೋಷಣೆ ಮಾಡುತ್ತಿದೆ. ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ, ಆರ್ಥಿಕತೆ ಕ್ಷೀಣಿಸುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕರ್ನಾಟಕ ಸರಕಾರದ ಅನ್ನಭಾಗ್ಯ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ ೫ ಕೆಜಿ ಅಕ್ಕಿಯನ್ನು ನಿಗದಿತ ದರ ಪಡೆದು ಕೇಂದ್ರ ಸರಕಾರ ನೀಡಬೇಕು, ವಿದ್ಯುತ್ ರಂಗ ಖಾಸಗೀಕರಣ, ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಬೇಕು, ವಿವಿಧ ರಾಜ್ಯಗಳಿಗೆ ತೆರಿಗೆ ಪಾಲು ನೀಡುವುದರಲ್ಲಿ ಆಗುತ್ತಿರುವ ತಾರತಮ್ಯ ತಡೆಯಬೇಕು, ಅಗತ್ಯ ವಸ್ತುಗಳು, ಔಷಧಿ ಬೆಲೆ ಮೇಲೆ ನಿಯಂತ್ರಣ ತರಬೇಕು, ಇಂಧನ ಮೇಲಿನ ತೆರಿಗೆ ಇಳಿಸಬೇಕು, ಆಹಾರ ಧಾನ್ಯಗಳ ಮೇಲಿನ ಜಿ.ಎಸ್.ಟಿ. ಹಿಂತೆಗೆದುಕೊಳ್ಳಬೇಕು, ಕಾಡಾನೆ ಹಾವಳಿ ತಡೆಗೆ ಸರಕಾರ ಶಾಶ್ವತ ಕ್ರಮವಹಿಸಬೇಕು, ಕೊಡಗು ಜಿಲ್ಲೆಯ ನಿವೇಶನ ರಹಿತರಿಗೆ ವಸತಿ ಕಲ್ಪಿಸಬೇಕು, ನೆರೆ ಸಂತ್ರಸ್ತರಿಗೆ ನೆರವು ನೀಡಬೇಕು ಸೇರಿದಂತೆ ಇನ್ನಿತರ ಹಕ್ಕೋತ್ತಾಯ ಮಂಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಕಾರ್ಯದರ್ಶಿ ರಮೇಶ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಎ. ಮಹದೇವ್, ಎನ್.ಡಿ. ಕುಟ್ಟಪ್ಪ, ಶಾಜಿ ರಮೇಶ್, ವೈ.ಕೆ. ಗಣೇಶ್, ಪಿ.ಆರ್. ಭರತ್, ಪದ್ಮಿನಿ ಸೇರಿದಂತೆ ಇನ್ನಿತರರು ಹಾಜರಿದ್ದರು.