(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಸೆ. ೭: ಕಳೆದ ಕೆಲವು ತಿಂಗಳಿನಿAದ ಜಿಲ್ಲೆಯ ಹಲವೆಡೆ ಕಾಡಾನೆಗಳ ದಾಳಿಯು ವಿಪರೀತವಾಗಿದೆ. ಹಲವೆಡೆ ದಾಳಿಯಾಗಿ ಅಮಾಯಕ ಜೀವಗಳನ್ನು ಕಾಡಾನೆ ಬಲಿ ತೆಗೆದುಕೊಂಡಿದೆ. ದಿನ ಬೆಳಗಾದರೆ ಕಾಡಾನೆ ದಾಳಿಗೆ ಸಿಲುಕಿದ ಪ್ರಕರಣಗಳು ವರದಿಯಾಗುತ್ತಲೆ ಇವೆೆ. ಕಾಡಾನೆ ಮಾನವ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡರೂ ನಿಯಂತ್ರಣ ಸಾಧ್ಯವಾಗಿಲ್ಲ. ಇದೀಗ ೩೬೦ ಡಿಗ್ರಿ ಕ್ಯಾಮರಾದ ಮೊರೆ ಹೋಗಿದೆ.

ವನ್ಯ ಜೀವಿ ಮಾನವ ಸಂಘರ್ಷದಲ್ಲಿ ಹಲವು ಜೀವಗಳು ಕಾಡಾನೆ ದಾಳಿಗೆ ಬಲಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಈ ವಿಷಯವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆಯ ಸಚಿವರಿಗೆ ಇಲ್ಲಿಯ ಗಂಭೀರತೆಯ ಬಗ್ಗೆ ಗಮನ ಸೆಳೆದು ಕಾಡಾನೆಯ ನಿಯಂತ್ರಣಕ್ಕೆ ವೈಜ್ಞಾನಿಕ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು.

ರಾಜ್ಯದ ಅರಣ್ಯ ಸಚಿವ ಈಶ್ವರ್‌ಖಂಡ್ರೆ ಜಿಲ್ಲೆಗೆ ಆಗಮಿಸಿ ಇಲ್ಲಿಯ ವಸ್ತು ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ, ಕಾಡಾನೆ ತಡೆಗೆ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದ್ದರು. ಕಾಡಾನೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ತಕ್ಷಣದಿಂದ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರು. ಕಾಡಾನೆಯ ನಿಯಂತ್ರಣಕ್ಕೆ ಬೇಕಾದ ಕಂದಕ ನಿರ್ಮಾಣ, ಸೋಲಾರ್ ಬೇಲಿ ಅಳವಡಿಕೆ, ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಕಾಡಾನೆಯು ಸಂಚರಿಸುವ ಮಾರ್ಗದಲ್ಲಿ ಇವುಗಳ ಚಲನವಲನಗಳನ್ನು ಕಂಡು ಹಿಡಿಯಲು ದಿನ ಪೂರ್ತಿ ಕಾರ್ಯ ನಿರ್ವಹಿಸುವಂತಹ ಅತ್ಯಾಧುನಿಕ ಮಾದರಿಯ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ನಿರ್ದೇಶನ ನೀಡಿದ್ದರು.

ಸಚಿವರ ನಿರ್ದೇಶನ ಹಾಗೂ ಶಾಸಕ ಎ.ಎಸ್. ಪೊನ್ನಣ್ಣನವರ ಸೂಚನೆ ಮೇರೆ ಅರಣ್ಯ ಇಲಾಖೆಯ ಅಧಿಕಾರಿಗಳು ಕುಂಜಿಲ,ಕಕ್ಕಬ್ಬೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಅತ್ಯಾಧುನಿಕ ಮಾದರಿಯ ದಿನ ಪೂರ್ತಿ ಕೆಲಸ ನಿರ್ವಹಿಸುವ ಗುಣಮಟ್ಟದ ಸೋಲಾರ್ ಸಿಸಿ ಕ್ಯಾಮರಾಗಳನ್ನು ಆಯಾಕಟ್ಟಿನ ಪ್ರದೇಶದಲ್ಲಿ ಅಳವಡಿಸಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದರಿಂದ ಕಾಡಾನೆಗಳು ಸುತ್ತಮುತ್ತಲಿನಲ್ಲಿ ಸಂಚರಿಸುವ ಸಂದರ್ಭ ಕ್ಯಾಮರಾಗಳ ಮೂಲಕ ಸಂದೇಶ ರವಾನೆಯಾಗುವಂತೆ ವ್ಯವಸ್ಥೆ ಕಲ್ಪಿಸಿದ್ದಾರೆ. ಜನರು ಓಡಾಡುವ ಪ್ರದೇಶದಲ್ಲಿ ಕಾಡಾನೆಗಳು ಕಾಣಿಸಿಕೊಂಡಾಗ ಕೂಡಲೇ ಮುನ್ನೆಚ್ಚರಿಕೆ ವಹಿಸಲು ಅಲ್ಲಿನ ನಾಗರಿಕರಿಗೆ ಸಂದೇಶ ನೀಡುವುದು ಇಲಾಖೆಯ ಮುಖ್ಯ ಉದ್ದೇಶ ವಾಗಿದೆ. ಅಲ್ಲದೆ ಸುತ್ತಮುತ್ತಲಿನಲ್ಲಿ ಕಾಡಾನೆಗಳ ಸಂಖ್ಯೆಯನ್ನು ಗುರುತಿಸಲು ಈ ಕ್ಯಾಮರಾವು ಸಹಾಯಕವಾಗಿದೆ.

ವೈಜ್ಞಾನಿಕ ರೀತಿಯಲ್ಲಿ ಆನೆ ಮಾನವ ಸಂಘರ್ಷವನ್ನು ತಡೆಗಟ್ಟಲು ಇಲಾಖೆಯು ಮುಂದಾಗಿದ್ದು, ಜಿಲ್ಲೆಯ ೫ ತಾಲೂಕಿನ ೪೦ ಕಡೆಗಳಲ್ಲಿ ಈ ರೀತಿಯ ಕ್ಯಾಮರಾವನ್ನು ಈಗಾಗಲೇ ಅಳವಡಿಸಲಾಗಿದ್ದು, ಕಾಡಾನೆ ಮೇಲೆ ಕಣ್ಣಿಡಲಾಗಿದೆ. ಕಾಡಾನೆಗಳ ಸಂಚಾರವನ್ನು ಗುರುತಿಸಿ ಮುಂದಾಗಬಹುದಾದ ಅನಾಹುತವನ್ನು ತಡೆಯಬಹುದು ಎಂಬುದು ಇಲಾಖೆ ಅಭಿಪ್ರಾಯ ವಾಗಿದೆ.

(ಮೊದಲ ಪುಟದಿಂದ) ಕಳೆದ ಆಗಸ್ಟ್ ೧೫ರ ಸಂಜೆಯ ವೇಳೆ ನಾಲಡಿ ಗ್ರಾಮದ ಕಂಬೆಯAಡ ಅನುಸುಬ್ಬಯ್ಯನವರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಇವರ ಮೇಲೆ ದಿಢೀರನೆ ಕಾಡಾನೆಯು ದಾಳಿ ನಡೆಸಿ ಇವರ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಸಾರ್ವಜನಿಕರು ಈ ಭಾಗದಲ್ಲಿ ಓಡಾಡುತ್ತಿರುವ ವೇಳೆ ಕಾಡಾನೆಗಳು ದಿಢೀರನೆ ಪ್ರತ್ಯಕ್ಷವಾಗುತ್ತಿರುವುದರಿಂದ ಹಲವು ಅನಾಹುತಗಳು ನಡೆಯುತ್ತಿವೆ.

ನಾಲಡಿ ಗ್ರಾಮದ ಅತ್ಯಂತ ಎತ್ತರದ ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾವು ಪ್ರತಿನಿತ್ಯವು ಸೋಲಾರ್ ಸಹಾಯದಿಂದ ಕೆಲಸ ನಿರ್ವಹಿಸುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿನ ಮಾಹಿತಿಗಳು ಲಭ್ಯವಾಗುತ್ತಿವೆ. ಕಾಡಾನೆಗಳ ಸಂಚಾರ ದೃಢ ಪಡುತ್ತಿದ್ದಂತೆಯೇ ಆಯಾಯ ಗ್ರಾಮದ ಜನರಿಗೆ ಸಂದೇಶಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಅರಣ್ಯ ಸಿಬ್ಬಂದಿಗಳು ತಕ್ಷಣವೆ ಸ್ಥಳಕ್ಕೆ ತೆರಳಿ ಕಾಡಾನೆಯನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ.

೪೦ ಕ್ಯಾಮರಾಗಳು

ಜಿಲ್ಲೆಯಲ್ಲಿ ವ್ಯಾಪಕವಾಗಿರುವ ವನ್ಯಜೀವಿ ಮಾನವ ಸಂಘರ್ಷ ತಡೆಯಲು ವೈಜ್ಞಾನಿಕ ರೀತಿಯಲ್ಲಿ ಜಿಲ್ಲೆಯ ವಿವಿಧ ಭಾಗದಲ್ಲಿ ಕಾಡಾನೆ ಸಂಚರಿಸುವ ಪ್ರದೇಶಗಳನ್ನು ಗುರುತಿಸಿ ೪೦ ಸೋಲಾರ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶಾಸಕರ ನಿರ್ದೇಶನದ ಮೇರೆ ಇಂತಹ ವೈಜ್ಞಾನಿಕ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಿಸಿ ಕ್ಯಾಮರಾ ಅಳವಡಿಕೆಯಿಂದ ಮಾನವನಿಗೆ ತೊಂದರೆ ನೀಡುವ ಕಾಡಾನೆಗಳನ್ನು ಪತ್ತೆಹಚ್ಚುವುದು ಸುಲಭವಾಗಲಿದೆ. ಅಂತಹ ಸಂದರ್ಭದಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯಲು ಕ್ಯಾಮರಾಗಳು ಸಹಾಯವಾಗಲಿವೆÉ.

-ಎ.ಟಿ.ಪೂವಯ್ಯ, ಡಿಸಿಎಫ್, ಮಡಿಕೇರಿ