ವರದಿ: ಈಶಾನ್ವಿ ಕಿರಣ್
ವೀರಾಜಪೇಟೆ, ಸೆ. ೬ : ವೀರಾಜಪೇಟೆ ಪಟ್ಟಣದಲ್ಲಿ ಬೀದಿ ದನಗಳ ಹಾವಳಿ ಟ್ರಾಫಿಕ್ ಸಮಸ್ಯೆಗೆ ಸಾಥ್ ಕೊಡುವಂತಿದೆ. ನಗರದಲ್ಲಿ ಇತ್ತೀಚೆಗೆ ಎಲ್ಲಿ ಬೇಕೆಂದರಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.
ಇಲ್ಲಿನ ಪ್ರಮುಖ ಸ್ಥಳಗಳಾದ ಎಫ್.ಎಂ.ಸಿ.ರಸ್ತೆ, ಗಡಿಯಾರ ಕಂಬ, ತಾಲೂಕು ಕಚೇರಿ ಸಮೀಪ, ತಾಲೂಕು ಮೈದಾನ, ಮೂರ್ನಾಡು ರಸ್ತೆ, ಮಲಬಾರ್ ರಸ್ತೆ ಸೇರಿದಂತೆ ಚಿಕ್ಕಪೇಟೆ, ಕೊಡವ ಸಮಾಜದ ಬಳಿ ಇನ್ನೂ ಮುಂತಾದ ಕಡೆಗಳಲ್ಲಿ ಬೀಡಾಡಿ ದನಗಳು ರಾಜಾರೋಷವಾಗಿ ರಸ್ತೆ ಮಧ್ಯದಲ್ಲಿಯೇ ಓಡಾಡಿಕೊಂಡಿರುತ್ತವೆ. ವಾಹನ ಸವಾರರು ಹಾರ್ನ್ ಹಾಕಿದರೂ ಕೂಡ ಅದಕ್ಕೂ ತಮಗೂ ಸಂಬAಧವಿಲ್ಲದAತೆ ಸುಮ್ಮನಿರುತ್ತವೆ. ಇದರಿಂದ ವಾಹನ ಸವಾರರೇ ಅವುಗಳನ್ನು ಸುತ್ತುಬಳಸಿ ಮುಂದೆ ಅನಿವಾರ್ಯವಾಗಿ ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಹಣ್ಣು ಹಂಪಲು, ತರಕಾರಿ ಸೇರಿದಂತೆ ಇತರ ಪದಾರ್ಥಗಳನ್ನು ಮಾರಾಟ ಮಾಡುವಲ್ಲಿ ಬಾಯಿ ಹಾಕುತ್ತದೆ. ಮಾರುಕಟ್ಟೆಗೂ ಪ್ರವೇಶ ಕೊಡುತ್ತವೆ.
ನಿತ್ಯ ಬೆಳಗಾಗುತ್ತಿದ್ದಂತೆ ರಸ್ತೆಗೆ ಇಳಿಯುವ ದನಗಳು ಸಂಜೆಯಾಗುತ್ತಿದ್ದAತೆ ಮಾಯವಾಗುತ್ತವೆ. ಒಮ್ಮೊಮ್ಮೆ ಸಂಜೆ ವೇಳೆ ರಸ್ತೆ ಮಧ್ಯದಲ್ಲಿ ಎಲ್ಲೆಂದರಲ್ಲಿ ಮಲಗುವ ದನಗಳ ಉಪಟಳದಿಂದಾಗಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಗಾಗುವ ಸನ್ನಿವೇಶಗಳು ಎದುರಾಗುತ್ತವೆ.
ಈ ಬೀಡಾಡಿ ದನಗಳಿಗೆ ರಸ್ತೆಯೇ ಮೇಯಲು, ಮಲಗಲು ಮೈದಾನವಾಗಿದೆ. ರಸ್ತೆ ಪಕ್ಕದ ಹಣ್ಣು, ತರಕಾರಿ ಅಂಗಡಿಗಳ ಸುತ್ತಲು ಪೆರೇಡ್ ಮಾಡುತ್ತವೆ. ಅಲ್ಲಿ ಬೀಳುವ ಹಣ್ಣು, ಸಿಪ್ಪೆಗಳೇ ಅವುಗಳಿಗೆ ಆಹಾರ. ನಗರ ವ್ಯಾಪ್ತಿಯ ದನ-ಕರುಗಳನ್ನು ಸಾಕುವವರು ಹಾಲು ಹಿಂಡಿದ ಬಳಿಕ ಅವುಗಳನ್ನು ಮೇಯಲು ಬಿಡುತ್ತಾರೆ. ಅವು ಪಟ್ಟಣದ ಎಲ್ಲೆಡೆ ಸಂಚರಿಸಿ ಆಹಾರ ಸೇವನೆ ಮಾಡಿ ಸಂಜೆ ಮನೆಗೆ ಬರುತ್ತವೆ. ಕೆಲವರು ಸಂಜೆ ಹಾಲು ಹಿಂಡಿದ ಬಳಿಕವೂ ಬೀದಿಗೆ ಬಿಡುತ್ತಾರೆ.
ಪಟ್ಟಣದಲ್ಲಿ ಬೀಡಾಡಿ ದನಗಳನ್ನು ಕೂಡಿ ಹಾಕಲು ದನದ ಕೊಂಡವಾಡಿಯೂ (ದೊಡ್ಡಿ)ಇಲ್ಲ. ಇನ್ನಾದರೂ ಅಧಿಕಾರಿಗಳು ನಿದ್ರೆಯಿಂದ ಎಚ್ಚೆತ್ತು ಹೆಚ್ಚಿನ ಅನಾಹುತ ಸಂಭವಿಸುವ ಪೂರ್ವದಲ್ಲಿಯೇ ಈ ಬೀಡಾಡಿ ದನಗಳನ್ನು ನಿಯಂತ್ರಿಸಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಲವೊಮ್ಮೆ ತಮ್ಮೊಳಗೆ ಗುದ್ದಾಡಿಕೊಂಡು ಸಾರ್ವಜನಿಕರಲ್ಲಿ ಭಯವುಂಟು ಮಾಡುತ್ತವೆ. ಜನರ ಸುರಕ್ಷತೆ ನಿಟ್ಟಿನಲ್ಲಿ ಬೀಡಾಡಿ ದನಗಳನ್ನು ನಿಯಂತ್ರಿಸಲು ಪುರಸಭೆ ಮುಂದಾಗಬೇಕಿದೆ. ಬೀಡಾಡಿ ದನಗಳ ಮಾಲೀಕರಿಗೆ ದಂಡ ಹಾಕಿದರೆ ಬೀಡಾಡಿ ದನಗಳ ಹಾವಳಿ ಕಡಿಮೆಯಾಗಬಹುದು.