ಮಡಿಕೇರಿ, ಸೆ. ೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ನಗರದ ಗಾಂಧಿ ಭವನದಲ್ಲಿ ಸರಳವಾಗಿ ಆಚರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಕೊಡಗು ಗೌಳಿ ಸಮಾಜದ ಅಧ್ಯಕ್ಷ ಜಿ.ವಿ. ರವಿಕುಮಾರ್, ಜಿ.ಸಿ. ಜಗದೀಶ್, ಜಿ.ಆರ್. ರಾಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಜವರಪ್ಪ, ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ಎನ್.ವೆಂಕಟ ನಾಯಕ್ ಇತರರು ಇದ್ದರು.

ಬಳಿಕ ಮಾತನಾಡಿದ ಬಿ.ಎನ್.ವೀಣಾ ಅವರು, ಜೀವನದಲ್ಲಿ ನಿಂತ ನೀರಾಗದೆ ಹರಿವ ನೀರಿನಂತೆ ಬದುಕನ್ನು ಮುನ್ನಡೆಸಬೇಕು. ಉತ್ತಮ ಬದುಕು ರೂಪಿಸಿಕೊಳ್ಳಲು ಮುಂದಾಗ ಬೇಕು. ಆ ನಿಟ್ಟಿನಲ್ಲಿ ಮಹಾಭಾರತದಲ್ಲಿ ಶ್ರೀಕೃಷ್ಣನ ಸಂದೇಶಗಳು ಧನಾತ್ಮಕ ಚಿಂತನೆಯನ್ನು ಒಳಗೊಂಡಿದೆ ಎಂದರು. ಕೊಡಗು ಗೌಳಿ ಸಮಾಜದ ಅಧ್ಯಕ್ಷ ಜಿ.ವಿ. ರವಿಕುಮಾರ್ ಮಾತನಾಡಿ, ಜೀವನದಲ್ಲಿ ಮಾನವೀಯ ಮೌಲ್ಯ ಮತ್ತು ಆದ್ಯಾತ್ಮಿಕತೆಯನ್ನು ಅಳವಡಿಸಿ ಕೊಳ್ಳಬೇಕು ಎಂದರು.

ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.