ನಾಪೋಕ್ಲು, ಸೆ. ೫: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ. ೩೯.೯೨ ಲಕ್ಷ ನಿವ್ವಳ ಲಾಭ ಗಳಿಸಿ ಉತ್ತಮ ಶ್ರೇಣಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ. ಅಪ್ಪಚ್ಚ ಅವರು ತಿಳಿಸಿದರು.
ಸಂಘದ ಸಂಭಾAಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಘದಲ್ಲಿ ಒಟ್ಟು ೧,೧೩೭ ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಡವಾಳ ೧.೫೦ ಕೋಟಿ ರೂ. ಇದೆ. ಸದಸ್ಯರು ೩.೫೮ ಕೋಟಿ ರೂ.ಗಳನ್ನು ಠೇವಣಿ ಇರಿಸಿದ್ದು, ಸದಸ್ಯರಿಗೆ ಕೆ.ಸಿ.ಸಿ. ಸಾಲ ರೂ. ೧೦.೪೮ ಕೋಟಿ ರೂ.ಗಳನ್ನು ವಿತರಣೆ ಮಾಡಲಾಗಿದೆ. ಜಾಮಿನು ಸಾಲ ಹಾಗೂ ಗೊಬ್ಬರ ಸಾಲ ರೂ. ೯೪.೬೨ ಲಕ್ಷ ವಿತರಣೆ ಮಾಡಲಾಗಿದೆ. ಸಂಘವು ಪ್ರಸಕ್ತ ೨೦೨೨-೨೩ ಸಾಲಿನಲ್ಲಿ ಉತ್ತಮ ವಹಿವಾಟು ನಡೆಸುವುದರ ಮೂಲಕ ರೂ. ೩೯.೯೨ ಲಕ್ಷ ನಿವ್ವಳ ಲಾಭ ಗಳಿಸಿ ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸದಸ್ಯರಿಗೆ ಈ ವರ್ಷ ೧೫% ಡಿವಿಡೆಂಡ್ ನೀಡಲಾಗುವುದು. ಸಂಘದಲ್ಲಿ ನಿರುಖು ಠೇವಣಿದಾರರಿಗೆ ಶೇ. ೭.೫೦ ಹಿರಿಯ ನಾಗರಿಕರಿಗೆ ಶೇ.೮ ಬಡ್ಡಿ ನೀಡಲಾಗುವುದು ಎಂದು ತಿಳಿಸಿದರು. ಸದಸ್ಯರ ಅನುಕೂಲ ಕ್ಕಾಗಿ ರಾಸಾಯನಿಕ ಗೊಬ್ಬರ, ಹತ್ಯಾರು ವಸ್ತುಗಳ ಮಾರಾಟ ಸೌಲಭ್ಯ ವನ್ನು ಒದಗಿಸಲಾಗಿದೆ ಎಂದರು.
ಸಂಘದ ವಾರ್ಷಿಕ ಮಹಾಸಭೆ ತಾ.೯ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸಂಘದ ಕಟ್ಟಡದಲ್ಲಿ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕೈಬುಲೀರ ಸಿ.ಯಶೋಧ, ನಿರ್ದೇಶಕರಾದ ಚೀಯಕ್ಪೂವಂಡ ಎಂ. ಅಪ್ಪಚ್ಚು, ಮಣವಟ್ಟೀರ ಎಂ. ಚಂಗಪ್ಪ, ಬದಂಜೇಟ್ಟಿರ ಎ. ತಿಮ್ಮಯ್ಯ, ಮಣವಟ್ಟೀರ ಎನ್. ಕುಶಾಲಪ್ಪ, ಎಂ.ಜಿ. ಸುರೇಶ್, ತೆಕ್ಕಡ ಬಿ. ಪೊನ್ನಪ್ಪ, ಚೀಯಕ್ಪೂವಂಡ ವಿ. ರೀನಾ, ಚೋಕೀರ ಯು. ಭೀಮಯ್ಯ, ಐ.ಜಿ. ಟಿಂಶ, ಪಿ.ಬಿ. ಬೆಳ್ಳಿಯಪ್ಪ, ಪ್ರಬಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಸ್. ಅನಿಲ್ ಕುಮಾರ್ ಅವರು ಉಪಸ್ಥಿತರಿದ್ದರು.