ಮಡಿಕೇರಿ, ಸೆ. ೫: ಭಾರತೀಯ ಜನತಾ ಪಕ್ಷ ಧರ್ಮ ಸಂಘರ್ಷ ಸೃಷ್ಟಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರಕ್ಕೆ ಈ ಬಾರಿ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ದ್ವೇಷ ರಾಜಕಾರಣದಿಂದ ದೂರವಿದ್ದು, ಸದೃಢ ಸಮಾಜ ನಿರ್ಮಾಣಕ್ಕೆ ಒಂದಾಗಿ ಮುನ್ನಡೆಯಬೇಕೆಂದು ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರುಗಳು ಕಾಯಕರ್ತರಿಗೆ ಕರೆ ನೀಡಿದರು.
ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಜಿಲ್ಲಾಧ್ಯಕ್ಷ ಹನೀಫ್ ಅವರ ಪದಗ್ರಹಣ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್, ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಸೇರಿದಂತೆ ಕೊಡಗಿನ ಶಾಸಕರುಗಳು, ಹಿರಿಯ ನಾಯಕರುಗಳು ಭಾಗವಹಿಸಿ ‘ದ್ವೇಷ ಬಿಟ್ಟು ಸದೃಢ ದೇಶ ಕಟ್ಟೋಣ’ ಎಂಬ ಸಂದೇಶ ನೀಡಿದರು.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್, ನೂತನ ಜಿಲ್ಲಾಧ್ಯಕ್ಷ ಹನೀಫ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ನಾವೆಲ್ಲ ಸಹೋದರತ್ವದಲ್ಲಿ ಸಾಗಬೇಕು. ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಳ್ಳಬೇಕು. ಜಾತಿ ತಾರತಮ್ಯ ಮಾಡಬಾರದು. ಸಂಘರ್ಷವನ್ನು ಪ್ರತಿಪಾದಿಸುವ ಬಿಜೆಪಿಯನ್ನು ಬುಡ ಸಹಿತ ಕಿತ್ತೊಯ್ದು ಸುಭದ್ರ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ೫ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಸರಕಾರ ನುಡಿದಂತೆ ನಡೆದಿದೆ. ಈ ಹಿಂದಿನ ಸರಕಾರದ ಸಾಲವನ್ನು ತೀರಿಸುತ್ತ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ, ಕರ್ನಾಟಕ ಸರಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್
(ಮೊದಲ ಪುಟದಿಂದ) ಸಭಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರ ಪರಿಶ್ರಮದ ಫಲವಾಗಿ ಕಾಂಗ್ರೆಸ್ ಜಿಲ್ಲೆಯಲ್ಲಿ ಅಧಿಕಾರ ಮರುಸ್ಥಾಪಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ರಾಜ್ಯದಲ್ಲಿಯೂ ಜನಹಿತ ಸರಕಾರವನ್ನು ಜನರು ಬಯಸಿದ ಹಿನ್ನೆಲೆ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ. ಸರ್ವ ಜನಾಂಗದ ಹಿತ ಬಯಸುವುದು ಕಾಂಗ್ರೆಸ್ ಮೂಲ ಮಂತ್ರ. ಅದನ್ನು ಕಾರ್ಯಗತಗೊಳಿಸುವುದು ಕಾರ್ಯಕರ್ತರ ಜವಾಬ್ದಾರಿ ಎಂದು ಒತ್ತಿ ಹೇಳಿದರು.
೧೦೦ ದಿನಗಳಲ್ಲಿ ೪ ಗ್ಯಾರಂಟಿ ಅನುಷ್ಠಾನ ಮಾಡಿರುವುದು ಕ್ರಾಂತಿಕಾರಕ ಕಾರ್ಯಕ್ರಮ. ರಾಜ್ಯಕ್ಕೆ ಕೇಂದ್ರ ಅಕ್ಕಿ ನೀಡಲು ತಯಾರಿಲ್ಲ. ಇದು ರಾಜಕೀಯ ಷಡ್ಯಂತ್ರ ಹೊರತು ಬೇರೇನು? ಎಂದು ಪ್ರಶ್ನಿಸಿದ ಸಲೀಂ, ಸರ್ವರಿಗೆ ಸಮಪಾಲು, ಸಮಬಾಳು ನಮ್ಮ ಧ್ಯೇಯ, ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದು ನಮ್ಮ ಸಂಕಲ್ಪ. ಕಳೆದ ಬಿಜೆಪಿ ಸರಕಾರ ಮಾಡಿದ ಹಗರಣಗಳ ತನಿಖೆ ಆರಂಭಿಸಿದ್ದೇವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ರಾಜ್ಯದ ಬೊಕ್ಕಸವನ್ನು ಬಿಜೆಪಿ ಲೂಟಿ ಮಾಡಿದೆ ಎಂದು ಆರೋಪಿಸಿದ ಸಲೀಂ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ೨೦ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಬಿಜೆಪಿಯಿಂದ ಬೇರ್ಪಡಿಸುವ ಕೆಲಸ
ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಮಾತನಾಡಿ, ಒಗ್ಗಟ್ಟಿರುವ ಕೊಡಗಿನ ಜನರನ್ನು ಬೇರ್ಪಡಿಸುವ ಕೆಲಸ ಬಿಜೆಪಿಯಿಂದ ಆಗಿದೆ. ದೇಶ ಕಾಪಾಡಿದ ವೀರರು ಕೊಡಗಿನಲ್ಲಿದ್ದಾರೆ. ಅವರು ಕೊಡಗು ಜಿಲ್ಲೆಯನ್ನು ಕಾಪಾಡುವುದಿಲ್ಲವೇ? ಒಡೆದು ಆಳುವ ನೀತಿಗೆ ತಕ್ಕ ಉತ್ತರ ಮತದಾರರು ಚುನಾವಣೆ ಮೂಲಕ ನೀಡಿದ್ದಾರೆ ಎಂದು ಕುಟುಕಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಕಾಂಗ್ರೆಸ್ ಸರಕಾರದ ಯೋಜನೆಗಳನ್ನು, ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯ ಕರ್ತರದ್ದಾಗಿದೆ. ಅಭಿವೃದ್ಧಿ ಮೂಲಕ ಜನರ ಮನಸ್ಸು ಗೆಲ್ಲಬೇಕು ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಭಿನ್ನಮತ ಸೃಷ್ಟಿಸದೆ ಪಕ್ಷದ ಬಲವರ್ಧನೆಗೆ ಶ್ರಮಿಸಲು ಕರೆ ನೀಡಿದರು.
ಅಲ್ಪಸಂಖ್ಯಾತ ಘಟಕದ ನೂತನ ಜಿಲ್ಲಾಧ್ಯಕ್ಷ ಹನೀಫ್ ಮಾತನಾಡಿ, ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಸಂಬAಧ ಪ್ರಾಮಾಣಿಕ ಪ್ರಯತ್ನ ಮಾಡ ಲಾಗುವುದು. ಅಲ್ಪಸಂಖ್ಯಾತ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇನೆ ಎಂದರು.
ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ, ಲೋಕಸಭಾ ಚುನಾವಣೆಗೆ ಪಕ್ಷ ಮತ್ತಷ್ಟು ಬಲಪಡಿಸಬೇಕು. ದುಡಿದವರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತದೆ. ಈಗಾಗಲೇ ಸಮಿತಿ ಮೂಲಕ ಮಂಡಳಿಗೆ ನಾಮನಿರ್ದೇಶನ ಕುರಿತು ಚರ್ಚೆ ನಡೆಯುತ್ತಿದೆ. ಪಕ್ಷದಲ್ಲಿದ್ದು ಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ದೂರವಿಡಲಾಗುವುದು. ಚುನಾವಣೆ ಸಂದರ್ಭ ಪಕ್ಷದ ವಿರುದ್ಧ ಷಡ್ಯಂತ್ರ ಮಾಡಿರುವುದು ಕ್ಷಮಿಸಲಾರದ ತಪ್ಪು. ಅಂತವರಿಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂದರು. ಕೆಲವರು ಆಡಳಿತ ಬಂದ ನಂತರ ಪಕ್ಷದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಪಕ್ಷದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರ ಕೆ.ಎಂ. ಲಕ್ಷö್ಮಣ್, ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡೀರ
ಅರುಣ್ ಮಾಚಯ್ಯ, ಮಾಜಿ ಜಿಲ್ಲಾಧ್ಯಕ್ಷರುಗಳಾದ ಟಿ.ಪಿ. ರಮೇಶ್, ಕೆ.ಕೆ. ಮಂಜುನಾಥ್, ಮಾಜಿ ಸಚಿವ ಇಬ್ರಾಯಿಂ ಮಾಸ್ಟರ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಜಿಲ್ಲಾ ವಕ್ತಾರ ತೆನ್ನೀರ ಮೈನಾ, ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಯುವ ಘಟಕದ ಅಧ್ಯಕ್ಷ ಮಿಥುನ್ ಹಾನಗಲ್ಲು, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಾನಂಡ ಪೃಥ್ಯು, ಪರಿಶಿಷ್ಟ ಜಾತಿ, ಪಂಗಡ ಘಟಕದ ಅಧ್ಯಕ್ಷ ಜಯೇಂದ್ರ, ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಘಟಕಗಳ ಅಧ್ಯಕ್ಷರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.