ಕುಶಾಲನಗರ, ಸೆ. ೪: ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಓರ್ವ ಪಂಚಾಯಿತಿಗೆ ಸಂಗ್ರಹಿಸಿದ ಲಕ್ಷಾಂತರ ರೂ. ನಗದನ್ನು ಬ್ಯಾಂಕಿಗೆ ಪಾವತಿಸದೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಿಗೆ ಗ್ರಾಮ ಪಂಚಾಯಿತಿಯ ಕರ ವಸೂಲಿಗಾರ ಎಂ.ಡಿ ಅನಿಲ್ ಕುಮಾರ್ ಎಂಬಾತ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಂಚಾಯಿತಿಯಲ್ಲಿ ಸಂಗ್ರಹವಾದ ಮೊತ್ತವನ್ನು ಬ್ಯಾಂಕಿಗೆ ಪಾವತಿಸದೆ ಇರುವುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಕಳೆದ ಎರಡು ತಿಂಗಳ ಹಿಂದೆ ತಿಳಿದು ಬಂದಿದೆ.
ಆ ಸಂದರ್ಭ ಕೂಡಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರ ವಸೂಲಿಗಾರನಿಗೆ ನೋಟೀಸ್ ನೀಡಿದ್ದು ಹಣವನ್ನು ತಕ್ಷಣ ಪಾವತಿಸುವಂತೆ ಸೂಚಿಸಲಾಗಿತ್ತು.
ಇದೀಗ ಎರಡು ದಿನಗಳ ಹಿಂದೆ ಅನಿಲ್ ಕುಮಾರ್ ಸ್ವಲ್ಪ ಮೊತ್ತವನ್ನು ಕೂಡಿಗೆ ಕೆನರಾ ಬ್ಯಾಂಕ್ನ ಖಾತೆಗೆ ಜಮಾ ಮಾಡಿರುವುದು ದಾಖಲೆಗಳ ಮೂಲಕ ದೃಢಪಟ್ಟಿದೆ.
ಕೆಲವು ವರ್ಷಗಳ ಅವಧಿಯಲ್ಲಿ ಪಂಚಾಯಿತಿ ಮಾಂಸ ಮಾರುಕಟ್ಟೆಯಿಂದ ಸಂಗ್ರಹವಾದ ಮೊತ್ತಗಳನ್ನು ಕೂಡ ಜಮಾ ಮಾಡದೆ ಇರುವುದು ಕೂಡ ಪರಿಶೀಲನೆ ಸಂದರ್ಭ ಕಂಡು ಬಂದಿದೆ. ಇದೀಗ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ಪಂಚಾಯತಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಕೊಡಗು ಜಿಲ್ಲಾ ಇಂಟಕ್ ಅಧ್ಯಕ್ಷ ಬಿ.ಡಿ. ಅಣ್ಣಯ್ಯ ಅವರು ವಂಚನೆ ಬಗ್ಗೆ ಬ್ಯಾಂಕ್ ದಾಖಲೆ ಕಲೆ ಹಾಕಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಸಂಬAಧಿಸಿದ ಪಂಚಾಯಿತಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕರ ವಸೂಲಿಗಾರ ಅನಿಲ್ ಕುಮಾರ್ ಪಂಚಾಯಿತಿ ವ್ಯಾಪ್ತಿಯಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸದೆ ಲಕ್ಷಾಂತರ ರೂಗಳ ಅವ್ಯವಹಾರ ನಡೆದಿರುವ ಶಂಕೆಯನ್ನು ಅಣ್ಣಯ್ಯ ವ್ಯಕ್ತಪಡಿಸಿದ್ದು ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವರದಿ- ಚಂದ್ರಮೋಹನ್