ಮಡಿಕೇರಿ, ಸೆ. ೪: ನಿಯಂತ್ರಣ ಕಳೆದುಕೊಂಡ ಕಾರೊಂದು ತಡೆಗೋಡೆಗೆ ಅಪ್ಪಳಿಸಿದ ಪರಿಣಾಮ ಚಾಲಕ ಮೃತಪಟ್ಟ ಘಟನೆ ನಗರದ ರಾಣಿಪೇಟೆಯ ಈದ್ಗಾ ಮೈದಾನ ಬಳಿ ನಡೆದಿದೆ.

ಇಲ್ಲಿನ ಗಣಪತಿ ಬೀದಿ ನಿವಾಸಿ, ವೃತ್ತಿಯಲ್ಲಿ ಆಟೋ ಮೆಕ್ಯಾನಿಕ್ ಆಗಿರುವ ಭಾಸ್ಕರ್ (೬೭) ಮೃತಪಟ್ಟ ದುರ್ದೈವಿ. ಮತ್ತೋರ್ವ ಸಹ ಪ್ರಯಾಣಿಕ ಸುಂಟಿಕೊಪ್ಪದ ರವಿ ಪೂಜಾರಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾ. ೩ ರಂದು ಸಂಜೆ ವೇಳೆ ನಗರದ ಈದ್ಗಾ ಮೈದಾನದ ಬಳಿಯಿಂದ ಭಾಸ್ಕರ್ ಕಾರು ಓಡಿಸಿಕೊಂಡು ಬರುವ ಸಂದರ್ಭ ‘ಬ್ರೇಕ್’ ಹಾಕಲು ಹೋಗಿ ‘ಎಕ್ಸಲೇಟರ್’ ತುಳಿದಿದ್ದಾರೆ. ಇದರಿಂದ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಿದ್ದ ವಿದ್ಯುತ್ ಕಂಬ ಸಹಿತ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಭಾಸ್ಕರ್ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಭಾಸ್ಕರ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ವಿದ್ಯುತ್ ಕಂಬ ಮುರಿದು ಬಿದ್ದಿದೆ. ಘಟನಾ ಸ್ಥಳಕ್ಕೆ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.